ಶಿವಮೊಗ್ಗ : ಸಹ ಜೀವನ ನಡೆಸುತ್ತಿದ್ದ ಮಹಿಳೆಯನ್ನು ಪ್ರಿಯಕರನೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕ್ಲಿಪುರ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ನಿವಾಸಿಯಾದ ರೂಪಾ(30) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಸಿಂಗೇರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ರೂಪಾಳ ಪತಿ ಕಳೆದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಇವರು ಇಲ್ಲಿನ ನೀಲಗಿರಿ ತೋಪಿನಲ್ಲಿ ಕಟಾವು ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರೂಪಾಳಿಗೆ ಸಿಂಗೇರ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಸಹಜೀವನ ನಡೆಸುತ್ತಿದ್ದರು. ಇಬ್ಬರು ಜೊತೆಯಾಗಿ ನೀಲಗಿರಿ ತೋಪಿನಲ್ಲಿ ಕೆಲಸ ಮಾಡುತ್ತಿದ್ದರು.
ಸೋಮವಾರ ಬೆಳಗ್ಗೆ ರೂಪಾಳ ಶವ ಸಂಕ್ಲಿಪುರದ ಅಕೇಷಿಯಾ ಪ್ಲಾಂಟೇಶನ್ ಬಳಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಸಿಂಗೇರ್ ಎಂಬಾತನನ್ನು ವಿಚಾರಣೆ ನಡೆಸಿದಾಗ ಆರೋಪಿ ಕೊಲೆ ಮಾಡಿದ್ದು ಬಯಲಾಗಿದೆ. ಸಿಂಗೇರ್ ಕೂಡ ಮದುವೆಯಾಗಿದ್ದು, ಈತನ ಹೆಂಡತಿಯೂ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಳು. ಈ ಕುರಿತು ಎಸ್ಪಿ ಮಿಥುನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.