ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್ ಆದೇಶಿಸಿದೆ.
ಸೆ. 12ರಂದು ಬಂಧಿತರಾಗಿದ್ದ ಆರೋಪಿಗಳ ಸಿಸಿಬಿ ಪೊಲೀಸರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ, ಪೊಲೀಸರು ಚೈತ್ರಾ ಸೇರಿ ಬಂಧಿತ ಏಳು ಆರೋಪಿಗಳನ್ನ ಶನಿವಾರ ಮೂರನೇ ಎಸಿಎಂಎಂ ಕೋರ್ಟ್ಗೆ ಹಾಜರು ಪಡಿಸಿದ್ದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧಿತ ಏಳು ಆರೋಪಿಗಳನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಈ ಮೂಲಕ ವಂಚನೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದ ಚೈತ್ರಾ ಆಂಡ್ ಗ್ಯಾಂಗ್ ಈಗ ಪರಪ್ಪನ ಅಗ್ರಹಾರ ಜೈಲಿನ ಕಡೆ ಮುಖ ಮಾಡಿದ್ದಾರೆ. ಸೆಪ್ಟೆಂಬರ್ 26ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕಳೆದ ಸೆಪ್ಟೆಂಬರ್ 12ರಂದು ಚೈತ್ರಾ ಕುಂದಾಪುರಳನ್ನು ಉಡುಪಿಯ ಕೃಷ್ಣ ಮಠದ ಸಮೀಪದಿಂದ ಮತ್ತು ಉಳಿದವರನ್ನು ಅವರವರ ಊರುಗಳಿಂದ ಬಂಧಿಸಲಾಗಿತ್ತು. ಮರುದಿನ ಮುಂಜಾನೆಯೇ ಬೆಂಗಳೂರಿಗೆ ಕರೆದುಕೊಂಡು ಬಂದು ಸೆ. 13ರಂದು ಸಂಜೆ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳಿಗೆ 10 ದಿನಗಳ ಸಿಸಿಬಿ ಕಸ್ಟಡಿ ವಿಧಿಸಿತ್ತು. ಸಿಸಿಬಿ ಕಸ್ಟಡಿ ಅವಧಿ ಸೆ. 23ಕ್ಕೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
ಪ್ರಕರಣದ ಪ್ರಧಾನ ಆರೋಪಿಯಾಗಿರುವ ಚೈತ್ರಾ ಕುಂದಾಪುರ, ಎರಡನೇ ಆರೋಪಿ ಗಗನ್ ಕಡೂರು, ನಾಲ್ಕನೇ ಆರೋಪಿ(ಆರೆಸ್ಸೆಸ್ ಪ್ರಚಾರಕನ ವೇಷಧಾರಿ) ರಮೇಶ್ ಕಡೂರು, ಐದನೇ ಆರೋಪಿ ಚನ್ನಾ ನಾಯ್ಕ್ (ಬೆಂಗಳೂರಿನ ಬಿಜೆಪಿ ರಾಷ್ಟ್ರೀಯ ನಾಯಕನೆಂದು ಪೋಸ್ ಕೊಟ್ಟವನು), ಆರನೇ ಆರೋಪಿ ಧನರಾಜ್ (ರಮೇಶ್ ಕಡೂರ್ ಮತ್ತು ಚನ್ನಾ ನಾಯ್ಕನನ್ನು ಸಂಪರ್ಕಿಸಿ ಕೊಟ್ಟವನು), ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಹಾಗೂ ಎಂಟನೇ ಆರೋಪಿ ಪ್ರಸಾದ್ ಬೈಂದೂರು (ಗೋವಿಂದ ಪೂಜಾರಿ ಆಪ್ತ ಮತ್ತು ಚೈತ್ರಾ ಕುಂದಾಪುರಳನ್ನು ಪರಿಚಯ ಮಾಡಿಕೊಟ್ಟವನು) ಅವರು 10 ದಿನಗಳ ಸಿಸಿಬಿ ಕಸ್ಟಡಿ ಮುಗಿಸಿದ್ದಾರೆ. ಇದೀಗ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.