ಬೆಂಗಳೂರು: ನೆರೆಯಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಮಹಿಳೆಯೊಬ್ಬರನ್ನು ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಕೊಟ್ಟಿಗೆಪಾಳ್ಯದ ನಿವಾಸಿ ರತ್ನಾ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಮನೆ ಬೀಗ ಹಾಕಿ ಬಳಿಕ ಶೂನಲ್ಲಿ ಕೀ ಇಟ್ಟು ಆಕೆಯ ನೆರೆಮನೆಯವರು ಊರಿಗೆ ಹೋಗಿದ್ದರು. ಮನೆ ಕೀ ಶೂನಲ್ಲಿಟಿರುವುದನ್ನು ನೋಡಿದ್ದ ರತ್ನಾ, ಕೀ ಬಳಸಿ ಮನೆ ಬೀಗ ತೆರೆದು ಕಳ್ಳತನ ಮಾಡಿದ್ದಳು. ಕೆಲ ದಿನಗಳ ನಂತರ ಆಕೆಯ ನೆರೆಮನೆಯವರು ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಆರೋಪಿ ರತ್ನಾ 1.06 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನವನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ನೆರೆಮನೆಯವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮನೆಯ ಬೀಗ ಮುರಿಯದೆ ಕಳ್ಳತನ ನಡೆಸಿದ್ದರ ಹಿಂದೆ ಪರಿಚಿತರ ಕೈವಾಡದ ಬಗ್ಗೆ ಶಂಕಿಸಿದ್ದಾರೆ. ಈ ಗುಮಾನಿ ಹಿನ್ನೆಲೆಯಲ್ಲಿ ಪೊಲೀಸರು ರತ್ನಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರತ್ನಾ ಬಾಯ್ಬಿಟ್ಟಿದ್ದಾಳೆ.