ಬೆಂಗಳೂರು: 108 ಅಂಬುಲೆನ್ಸ್ ಕೆಲ ಚಾಲಕರಿಗೂ ಖಾಸಗಿ ಆಸ್ಪತ್ರೆಯವರಿಗೂ ಒಂದು ಒಪ್ಪಂದ ಇರುತ್ತದೆ. 108 ಅಂಬುಲೆನ್ಸ್ ಚಾಲಕರು ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಬಿಡ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ನಡೆದ ಕಾರ್ಯಕ್ರಮದಲ್ಲಿ ನೂತನ 262 ಅಂಬುಲೆನ್ಸ್ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ 108 ಅಂಬುಲೆನ್ಸ್ ಕೆಲ ಚಾಲಕರ ವಿರುದ್ಧ ಡಿಕೆಶಿ ಅಸಮಾಧಾನ ಹೊರಹಾಕಿದರು. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಬೇಕು ಅಂತ ಯಾಕೆ ಬಡಿದುಕೊಳ್ತೇನೆ ಗೊತ್ತಾ? 108 ಅಂಬುಲೆನ್ಸ್ನವರಿಗೂ ಖಾಸಗಿ ಆಸ್ಪತ್ರೆಯವರಿಗೂ ಒಂದು ಒಪ್ಪಂದ ಇರುತ್ತೆ. 108 ಅಂಬುಲೆನ್ಸ್ ಚಾಲಕರಿಗೆ ಈ ಚೇಷ್ಟೆ ಇದೆ. ರೋಗಿಗಳನ್ನ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಬಿಡ್ತಾರೆ ಎಂದು ಗರಂ ಆದರು.
ಅಲ್ಲಿಗೆ ಹೋದ ಮೇಲೆ ಬಿಲ್ ಜಾಸ್ತಿ ಆಗೇ ಆಗುತ್ತೆ. ಅವರು ಬಿಲ್ ಕೊಡುವುದಕ್ಕೆ ಆಗದೇ ಶಾಸಕರ ಬಳಿ ಬರುತ್ತಾರೆ. ನಾನು ತಿಂಗಳಿಗೆ ಇದೇ ರೀತಿ 20 ಲಕ್ಷ ಕೊಡ್ತೀನಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಚೆನ್ನಾಗಿದೆ. ಅಂಬುಲೆನ್ಸ್ ಚಾಲಕರು ರೋಗಿಗಳನ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಿ. ನಾನು ಮೊನ್ನೆ ವಿಕ್ಟೋರಿಯಾದಲ್ಲಿ ಹಲ್ಲಿನ ನೋವಿಗೆ ಚಿಕಿತ್ಸೆ ಪಡೆದೆ. ಅಲ್ಲಿ ವ್ಯವಸ್ಥೆ ಚೆನ್ನಾಗಿದೆ ಎಂದು ತಿಳಿಸಿದರು.