ಬೆಂಗಳೂರು : ಕೇಂದ್ರ ಹಣಕಾಸು ಆಯೋಗದ ವರದಿ ಅನ್ವಯ ಹಣಕಾಸು ಹಂಚಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗಿದೆ. ಹೀಗಾಗಿ ಹಣಕಾಸು ಆಯೋಗವು ಹಿಂದೆ ಶಿಫಾರಸು ಮಾಡಿರುವಂತೆ 11,495 ಕೋಟಿ ರು. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಎಂದು ಕೇಂದ್ರ ಹಣಕಾಸು ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕ ರಾಜ್ಯಕ್ಕೆ ತೆರಿಗೆ ಆದಾಯದ ಪಾಲು ಹಂಚಿಕೆಯನ್ನು ಶೇ.3.64 ರಷ್ಟು ಕಡಿಮೆ ಮಾಡಲಾಯಿತು. 2021ರಿಂದ 26ವರೆಗಿನ ಅವಧಿಯ 15ನೇ ಹಣಕಾಸು ಆಯೋಗದಲ್ಲಿ ಶೇ.4.71 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಕೇಂದ್ರದಿಂದ ರಾಜ್ಯದ ಪಾಲು 37,011 ಕೋಟಿ ರು. ಕಡಿಮೆಯಾಗಿದೆ ಎಂದಿದ್ದಾರೆ.
ಹೀಗಾಗಿ 14ನೇ ಹಣಕಾಸು ಆಯೋಗದಲ್ಲಿ ಆಗಿದ್ದ ಅನ್ಯಾಯ ಸರಿಪಡಿಸಲು 2020-21ರಲ್ಲಿ 5,495 ಕೋಟಿ ರು. ವಿಶೇಷ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಲು ಹಣಕಾಸು ಆಯೋಗ ವರದಿ ನೀಡಿತ್ತು. ಅಲ್ಲದೆ, 2021-26ರ 15ನೇ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ ಬೆಂಗಳೂರು ಜಲಮೂಲಗಳ ಅಭಿವೃದ್ಧಿಗೆ ಹಾಗೂ ಪೆರಿಫೆರಲ್ ರಿಂಗ್ ರಸ್ತೆಗೆ 6 ಸಾವಿರ ಕೋಟಿ ರು. ವಿಶೇಷ ಅನುದಾನ ನೀಡಲು ಶಿಫಾರಸು ಮಾಡಿತ್ತು. ಆದರೆ ಈವರೆಗೆ ರಾಜ್ಯಕ್ಕೆ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಕೇಂದ್ರವು ರಾಜ್ಯಕ್ಕೆ ನೆರವು ನೀಡುತ್ತಿಲ್ಲ. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಬೀರಿದೆ. ಹೀಗಾಗಿ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದಿರುವ ಪತ್ರದಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.