ಮಂಗಳೂರು: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಮಂಗಳೂರು ಪೋಕ್ಸೊ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಈ ಮಹತ್ವದ ತೀರ್ಪು ನೀಡಿದ್ದಾರೆ. ಬಾಲಕಿಗೆ 10.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಹರಡೊಳ್ಳಿಯ ನಿವಾಸಿ ಶ್ರೀಕಾಂತ್ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ಬಜ್ಪೆ ಠಾಣೆ ವ್ಯಾಪ್ತಿಯ ಕರಂಬಾರ್ ಗ್ರಾಮದ ಕಂಪನಿಯ ಶೆಡ್ನಲ್ಲಿ ಬಾಲಕಿ ಪೋಷಕರೊಂದಿಗೆ ವಾಸವಾಗಿದ್ದಳು. ಆರೋಪಿ ಪಕ್ಕದ ಶೆಡ್ನಲ್ಲಿ ವಾಸವಾಗಿದ್ದ.
ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಪ್ರೀತಿಸುವ ನೆಪದಲ್ಲಿ ಬಾಲಕಿಯ ಮನವೊಲಿಸಿ ಏಪ್ರಿಲ್ 12, 2019ರಿಂದ ಹಲವಾರು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದರ ಫೋಟೋಗಳನ್ನು ತೆಗೆದುಕೊಂಡಿದ್ದ ಆರೋಪಿ, ಯಾರಿಗಾದರೂ ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಶಾಲೆಯಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಬಳಿಕ ಮಗುವಿಗೆ ಜನ್ಮ ನೀಡಿದ್ದ ಬಾಲಕಿ ಪೋಲಿಸ್ ದೂರು ದಾಖಲು ಮಾಡಿದ್ದಳು. ಬಜ್ಪೆ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧಾರಿಸಿ ಪ್ರಕರಣ ದಾಖಲು ಮಾಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ನಗರ ಉತ್ತರ ಎಸಿಪಿಯಾಗಿದ್ದ ಶ್ರೀನಿವಾಸ್ ಗೌಡ ಪ್ರಾರ್ಥಮಿಕ ತನಿಖೆ ನಡೆಸಿದರೆ ಹಾಗೂ ಎಸಿಪಿ ಕೆ ಯು.ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.