ಗುಜರಾತ್ : ಕಳೆದ 24 ಗಂಟೆಗಳಲ್ಲಿ ಗುಜರಾತ್ನ ವಿವಿಧ ಭಾಗಗಳಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ನಡೆಯುವ ಗಾರ್ಬಾ ನೃತ್ಯದಲ್ಲಿ ತೊಡಗಿದ್ದ 10 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಧ್ಯ ವಯಸ್ಕರಾಗಿದ್ದಾರೆ.
ಇಬ್ಬರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೃದಯ ಸಂಬಂಧಿ ಸಮಸ್ಯೆಗಳಿಂದ ಅಂಬುಲೆನ್ಸ್ ಸೇವೆಗಾಗಿ 521 ಕರೆಗಳು ಮತ್ತು ಉಸಿರಾಟದ ತೊಂದರೆಗಾಗಿ 609 ಕರೆಗಳು ಬಂದಿವೆ. ಗಾರ್ಬಾ ಆಚರಣೆಗಳು ನಡೆಯುವ ಸಂಜೆ 6 ರಿಂದ 2 ಗಂಟೆಯ ನಡುವೆ ಈ ಕರೆಗಳು ದಾಖಲಾಗಿದೆ. ಈ ಆತಂಕಕಾರಿ ಬೆಳವಣೆಗೆ ಸರ್ಕಾರ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಭಾರೀ ಆತಂಕಕ್ಕೂ ಕಾರಣವಾಗಿದೆ.
ಗಾರ್ಬಾ ಕಾರ್ಯಕ್ರಮ ನಡೆಯುವ ಸ್ಥಳಗಳ ಸಮೀಪವಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಈ ಬಗ್ಗೆ ಜಾಗೃತವಾಗಿರುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ಗಾರ್ಬಾ ಸಂಘಟಕರು ಸ್ಥಳಗಳಲ್ಲಿ ವೈದ್ಯರು ಮತ್ತು ಅಂಬುಲೆನ್ಸ್ಗಳನ್ನು ಇರಿಸಿಕೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ. ಇದರೊಂದಿಗೆ ಕಾರ್ಯಕ್ರಮಗಳ ಆಯೋಜಕರಿಗೆ ಸಿಪಿಆರ್ ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ಇನ್ನೂ ನವರಾತ್ರಿ ಆರಂಭಕ್ಕೂ ಮುನ್ನ ನೃತ್ಯ ತರಬೇತಿಯಲ್ಲಿದ್ದ ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದರು.