ಬೆಂಗಳೂರು: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಎಕಾಗ್ರಿಡ್ ವಿಶ್ವವಿದ್ಯಾಲಯವು ಬೆಂಗಳೂರು ಅಥವಾ ಮೈಸೂರಿನಲ್ಲಿ ತನ್ನ ಕ್ಯಾಂಪಸ್ ತೆರೆಯಲು ಆಸಕ್ತಿ ತೋರಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ 200 ಎಕರೆ ಜಮೀನಿಗಾಗಿ ಬೇಡಿಕೆ ಸಲ್ಲಿಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಸಚಿವರು ಮಂಗಳವಾರ ಸ್ಯಾನ್ಫ್ರಾನ್ಸಿಸ್ಕೊದಲ್ಲಿ ವಿಶ್ವವಿದ್ಯಾಲಯದ ಪ್ರತಿನಿಧಿಗಳಾದ ಪ್ರೊ.ಕೃಷ್ಣ ಸಾರಸ್ವತ್ ಮತ್ತು ಸಿಒಒ ಶೈಲೇಂದ್ರ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
2018 ರಲ್ಲಿ ಭಾರತದಲ್ಲೇ ಕಾರ್ಯಾರಂಭ ಮಾಡಿರುವ ಎಕಾಗ್ರಿಡ್ ವಿಶ್ವವಿದ್ಯಾಲಯವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವ ಗುರಿ ಹೊಂದಿದೆ. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯವು ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸಲು ಉದ್ದೇಶಿಸಿದೆ. ಅಲ್ಲದೇ ದೇಶದಲ್ಲಿ ಅದು ಅಗ್ರಶ್ರೇಣಿಯ ಮೊದಲ 25 ಸ್ಥಾನಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಮೆಕ್ಯಾನಿಕಲ್ ಬಿಡಿಭಾಗಗಳ ಉತ್ಪಾದನೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಫಿಕ್ಟೀವ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಕೂಡ ಇದೇ ಸಂದರ್ಭ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಗ್ರ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ ಎಂದು ಪಾಟೀಲ ವಿವರಿಸಿದ್ದಾರೆ.