ಆಂಧ್ರಪ್ರದೇಶ : ಶನಿವಾರ ರಾತ್ರಿ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಎನ್ಟಿಆರ್ ಜಿಲ್ಲೆಯ ಬಳಿ ವಶಕ್ಕೆ ಪಡೆಯಲಾಗಿದ್ದು, ತೆಲಂಗಾಣ-ಆಂಧ್ರ ಪ್ರದೇಶ ಗಡಿಯ ಬಳಿ ತಮ್ಮ ಬೆಂಗಾವಲು ಪಡೆಯನ್ನು ತಡೆದ ಪೊಲೀಸರ ವಿರುದ್ಧ ನಟ, ರಾಜಕಾರಣಿ ಪವನ್ ಕಲ್ಯಾಣ್ ರಸ್ತೆಯ ಮೇಲೆ ಮಲಗಿ
ಪ್ರತಿಭಟಿಸಿದ್ದರಿಂದ ಕೆಲಕಾಲ ನಾಟಕೀಯ ಪರಿಸ್ಥಿತಿ ಸೃಷ್ಟಿಯಾಗಿತ್ತು ಎಂದು ಶನಿವಾರ ನಡೆದ ನಸುಕಿನ ಕಾರ್ಯಾಚರಣೆಯಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ವಿರೋಧಿಸಿ, ನಾಯ್ಡು ಅವರಿಗೆ ಬೆಂಬಲ ಸೂಚಿಸಲು ಪವನ್ ಕಲ್ಯಾಣ್ ವಿಜಯವಾಡದತ್ತ ತೆರಳುತ್ತಿದ್ದರು. ಅವರು ಆರಂಭದಲ್ಲಿ ವಿಮಾನದ ಮೂಲಕ ಆಂಧ್ರಪ್ರದೇಶವನ್ನು ತಲುಪಲು ಪ್ರಯತ್ನಿಸಿದರಾದರೂ, ಕೃಷ್ಣಾ ಜಿಲ್ಲೆಯ ಪೊಲೀಸರು ಅವರಿಗೆ ಗನ್ನಾವರಂ ವಿಮಾನ ನಿಲ್ದಾಣಕ್ಕೆ ತಲುಪುವ ವಿಶೇಷ ವಿಮಾನವನ್ನು ಖಾತ್ರಿಗೊಳಿಸಿದ್ದರು. ಆದರೆ, ಆ ವಿಮಾನವು ಹೈದರಾಬಾದ್ ನಿಂದ ನಿರ್ಗಮಿಸಲೇ ಇಲ್ಲ.
ಹೀಗಾಗಿ ರಸ್ತೆ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ತೆರಳಲು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ನಿರ್ಧರಿಸಿದರಾದರೂ, ಅವರ ಬೆಂಗಾವಲು ವಾಹನಗಳನ್ನು ಶನಿವಾರ ಎನ್ಟಿಆರ್ ಜಿಲ್ಲೆಯ ಬಳಿ ಎರಡು ಬಾರಿ ತಡೆ ಹಿಡಿಯಲಾಯಿತು. ಹೀಗಾಗಿ ಪವನ್ ಕಲ್ಯಾಣ್ ಅವರ ವಾಹನವು ಏಕಾಂಗಿಯಾಗಿ ವಿಜಯವಾಡ ಜಿಲ್ಲೆಯ ಮಂಗಳಗಿರಿಯತ್ತ ತೆರಳಬೇಕಾಯಿತು. ನಂತರ, ವಿಜಯವಾಡದತ್ತ ತೆರಳದಂತೆ ಅವರನ್ನು ತಡೆದಾಗ ಅನುಮಂಚಿಪಲ್ಲಿ ರಸ್ತೆಯಲ್ಲಿ ಮಲಗಿ ಪವನ್ ಕಲ್ಯಾಣ್ ಪ್ರತಿಭಟಿಸಿದರು.