ಕೋಲಾರ: 2 ದಿನಗಳ ಹಿಂದೆ ನಡೆದ ಆ ಒಂದು ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಯಾರನ್ನು ಯಾವಾಗ ಪೊಲೀಸರು ಬಂಧಿಸ್ತಾರೋ ಅನ್ನೋ ಆತಂಕದಲ್ಲಿ ಊರಿಗೆ ಊರೇ ಖಾಲಿಯಾಗಿದೆ. ಜನರು ಆ ಗ್ರಾಮವನ್ನೇ ತೊರೆದಿದ್ದಾರೆ.
ಬಿಕೋ ಎನ್ನುತ್ತಿರುವ ಗ್ರಾಮ, ಪೊಲೀಸರಿಂದ ಗ್ರಾಮದಲ್ಲಿ ಮೊಕ್ಕಾಂ, ಗ್ರಾಮಕ್ಕೆ ಗ್ರಾಮವನ್ನೇ ತೊರೆದಿರುವ ಗ್ರಾಮಸ್ಥರು. ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ. ಕಳೆದ 2 ದಿನಗಳ ಹಿಂದೆ ಪತಿಯಿಂದಲೇ ಪತ್ನಿಯ ಭೀಕರ ಕೊಲೆ ನಡೆದಿತ್ತು. ಈ ವೇಳೆ ಆರೋಪಿ ಬೀಸಿದ ಮಚ್ಚಿಗೆ ಒರ್ವ ಮಹಿಳೆ ಹತ್ಯೆಯಾಗಿದ್ದರೂ 4 ಕೊಲೆ ಯತ್ನ ಹಾಗೂ 10 ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿತ್ತು. ಈ ವೇಳೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಬಳಿಕ ಪ್ರತ್ಯೇಕ 3 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ರು. ಆದರೆ ಆರೋಪಿ ಬಂಧಿಸಲು ಮುಂದಾದ ವೇಳೆ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದ ಗ್ರಾಮಸ್ಥರಿಗೂ ಈಗ ಕಂಟಕ ಎದುರಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನಂಬಿಹಳ್ಳಿ ಗ್ರಾಮದ 1,000ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ಇದೀಗ ಬಂಧನದ ಭೀತಿಯಲ್ಲಿ ಗ್ರಾಮಸ್ಥರು ಊರನ್ನೇ ತೊರೆದಿದ್ದಾರೆ.
ಇದ್ಯಾವುದಕ್ಕೂ ಗ್ರಾಮಸ್ಥರು ಜಗ್ಗದ ಹಿನ್ನೆಲೆ ಪೊಲೀಸರು ಗಾಳಿಯಲ್ಲಿ 7 ಸುತ್ತಿನ ಗುಂಡು ಹಾಯಿಸಿ ಅಶ್ರುವಾಯು ಸಿಡಿಸಿದ ನಂತರ ಪರಿಸ್ಥಿತಿ ಹತೋಟಿಗೆ ಬಂದಿತ್ತು. ನಂತರ ಆರೋಪಿ ನಾಗೇಶ್ ನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದ ವೇಳೆ ಪೊಲೀಸರ ಮೇಲೆಯೂ ಮಚ್ಚಿನಿಂದ ದಾಳಿ ಮಾಡಿ, ಎಸ್ಪಿ ನಾರಾಯಣ್ ಸೇರಿದಂತೆ 10 ಮಂದಿ ಪೊಲೀಸರು ಗಾಯಗೊಂಡಿದ್ದರು. ಈ ವೇಳೆ ಆರೋಪಿಯ ಕಾಲು ಹಾಗೂ ಕೈಗೆ 5 ಸುತ್ತಿನ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದು ಚಿಕಿತ್ಸೆ ಕೊಡಿಸಲಾಗಿತ್ತು. ಹೀಗಾಗಿ ಗ್ರಾಮದಲ್ಲಿರುವ ಮಹಿಳೆಯರು, ಮಕ್ಕಳು, ಪುರುಷರು ಬಂಧನದ ಭೀತಿಯಿಂದಾಗಿ ಗ್ರಾಮವನ್ನು ಬಿಟ್ಟಿದ್ದಾರೆ.
ಒಟ್ಟಿನಲ್ಲಿ ಮಾಡಿದ್ದುಣ್ಣು ಮಾರಾಯ ಅಂತಾ ಕಾನೂನಿನ ವಿರುದ್ಧವಾಗಿ ಆರೋಪಿಯನ್ನು ಕೊಲ್ಲುವ ಯತ್ನ ಹಾಗೂ ಪೊಲೀಸರಿಗೆ ಅಡ್ಡಿಪಡಿಸಿ ಇಡೀ ಗ್ರಾಮ ಸಂಕಷ್ಟಕ್ಕೀಡಾಗಿದೆ. ಆದರೂ 1,000ಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಾಗಿದ್ದು ಇದೊಂದು ದೊಂಬಿ ಪ್ರಕರಣ, ಇದಕ್ಕೆ ಅಷ್ಟೊಂದು ಮಹತ್ವ ಇಲ್ಲ ಎನ್ನುವುದು ಇಲಾಖಾಧಿಕಾರಿಗಳ ಮಾತು.