ದಕ್ಷಿಣ ಕನ್ನಡ: ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ತೆರವು ಜಟಾಪಟಿ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್ 309ರಲ್ಲಿ ಅನಂತು ಅವರು ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ನೂತನ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬಗ್ಗೆ ಮಂಗಳೂರು ಅರಣ್ಯ ಇಲಾಖೆಗೆ ದೂರು ಬಂದಿತ್ತು. ಈ ಹಿನ್ನೆಲೆ ಅಕ್ಟೋಬರ್ 6 ರಂದು ಅರಣ್ಯ ಇಲಾಖೆ ಸಿಬ್ಬಂದಿ ನೂತನ ಮನೆಯ ಫೌಂಡೇಶನ್ ತೆರವುಗೊಳಿಸಿದ್ದರು. ಘಟನೆ ವಿಚಾರ ತಿಳಿದು ಶಾಸಕ ಹರೀಶ್ ಪೂಂಜ ಅಕ್ಟೋಬರ್ 7 ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಧಿಕಾರಿಗಳಿಗೆ ಬೈದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಶಾಸಕ ಹರೀಶ್ ಪೂಂಜ ವಿರುದ್ಧ ಐಪಿಸಿ 1860 (U/S-143, 353, 504, 149) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.