ಶಿವಮೊಗ್ಗ : ಲೋಕಸಭಾ ಚುನಾವಣೆಯೊಳಗೆ ಅಥವಾ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಲ್ಲ. ರಾಜ್ಯದಲ್ಲಿ ನೂರಕ್ಕೆ ನೂರು ಆಪರೇಷನ್ ಕಮಲ ನಡೆದೇ ನಡೆಯುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಅವರ ಪಕ್ಷದ ಅನೇಕ ಶಾಸಕರು ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವತಃ ಸಚಿವ ಪ್ರಿಯಾಂಕ್ ಖರ್ಗೆಯವರೇ ಈ ವರ್ಷ ಅಭಿವೃದ್ಧಿಗೆ ಯಾವುದೇ ಹಣ ಇಲ್ಲ ಎಂದಿದ್ದಾರೆ. ಮುಗ್ಧ ಜನರಿಗೆ ಟೋಪಿ ಹಾಕಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಧಾರವಿಲ್ಲದೆ ಮಾತನಾಡಲ್ಲ. ಆದರೂ, ಸಿ.ಟಿ.ರವಿ ಮತ್ತು ಈಶ್ವರಪ್ಪ ರೀತಿ ಸಂತೋಷ್ ಜೀ ಮಾತನಾಡಿದ್ದಾರೆಂದು ಡಿ.ಕೆ.ಶಿವಕುಮಾರ್ ಲಘುವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಬರಗಾಲ ಬಂದಿದ್ದರೂ ಒಬ್ಬನೇ ಒಬ್ಬ ಮಂತ್ರಿ ರೈತರ ಬಳಿಗೆ ತೆರಳಿ ಅವರ ಕಷ್ಟ-ಸುಖ ವಿಚಾರಿಸಿಲ್ಲ. ಭಂಡತನದಿಂದ ಸರ್ಕಾರ ನಡೆಸುತ್ತಾ ಇದ್ದಾರೆ. ತಿಹಾರ್ ಜೈಲಿನಲ್ಲಿದ್ದು ಬಂದವರು ಬೇರೆ ಜನಪ್ರತಿನಿಧಿಗಳಿಗೆ ವೇದಾಂತ ಹೇಳುತ್ತಿದ್ದಾರೆ ಎಂದು ಕುಟುಕಿದರು.
‘ಇಂಡಿಯಾ’ ಮಿತ್ರ ಪಕ್ಷಗಳಲ್ಲಿ ಒಮ್ಮತವಿಲ್ಲ ಎಂದು ಈಗಾಗಲೇ ಸಾಬೀತಾಗಿದೆ. ರಾಷ್ಟ್ರೀಯ ಜನಗಣತಿ ಮಾಡಬೇಕೆಂಬ ಸಲಹೆಗೆ ಸ್ವತಃ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಸೀಟು ಹಂಚಿಕೆ ವಿಚಾರ ಇನ್ನೂ ಬಗೆಹರಿದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಒಳಜಗಳವಿದ್ದು, ಒಂದಾಗಲು ಸಾಧ್ಯವೇ ಇಲ್ಲ. ಸೂರ್ಯ, ಚಂದ್ರ ಇರುವುದು ಎಷ್ಟುಸತ್ಯವೋ ಮೋದಿ ಸರ್ಕಾರ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು. ಪ್ರತಿಪಕ್ಷ ನಾಯಕರ ಆಯ್ಕೆ ನಮ್ಮ ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಸಮಯ ಬಂದಾಗ ನಾಯಕನ ಆಯ್ಕೆ ಮಾಡುತ್ತಾರೆ. ಮೊದಲು ನಿಮ್ಮ ಪಕ್ಷದ ಒಳಜಗಳ ಬಗೆಹರಿಸಿಕೊಳ್ಳಿ. ಈ ಹಿಂದೆ ಎರಡು ವರ್ಷಗಳ ಕಾಲ ಎಐಸಿಸಿ ಅಧ್ಯಕ್ಷರೇ ಇರಲಿಲ್ಲ. ಈಗ ನಿಮ್ಮ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಮೇಲೆಯೇ ವಿಶ್ವಾಸವಿಲ್ಲ. ರಾಜ್ಯದಲ್ಲಿ ಮತ್ತೆ ನೂರಕ್ಕೆ ನೂರು ‘ಆಪರೇಷನ್ ಕಮಲ’ ನಡೆದೇ ನಡೆಯುತ್ತದೆ ಎಂದರು.