ಹರಿಯಾಣ ರಾಜ್ಯ : ಕುಟುಂಬಸ್ಥರ ಎದುರೇ ಮೂವರು ಮಹಿಳೆಯರನ್ನು ನಾಲ್ವರು ಅಪರಿಚಿತ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿದೆ. ಕಳೆದ ಬುಧವಾರ ತಡರಾತ್ರಿ ಈ ಅಹಿತಕರ ಘಟನೆ ನಡೆದಿದ್ದು, ನಾಲ್ವರು ಕಾಮುಕರು ಮೂವರು ಮಹಿಳೆಯರನ್ನು ಅವರ ಕುಟುಂಬದವರ ಮುಂದೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಆರೋಪಿಗಳು ಚಾಕು ಮತ್ತು ಇತರ ಹರಿತವಾದ ಆಯುಧಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಮನೆಗೆ ನುಗ್ಗಿದ ಕಾಮುಕರು ಅಲ್ಲಿದ್ದ ಮೂವರು ಮಹಿಳೆಯ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅದಕ್ಕೂ ಮುನ್ನ ಮನೆಯ ಸದಸ್ಯರನ್ನೆಲ್ಲ ಹಗ್ಗದಿಂದ ಕಟ್ಟಿ ಹಾಕಿ ಬೆದರಿಕೆ ಹಾಕಿದ್ದಲ್ಲದೇ ಅವರ ಬಳಿ ಇದ್ದ ಹಣ, ಚಿನ್ನಾಭರಣವನ್ನೂ ದೋಚಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಆಘಾತಕ್ಕೊಳಗಾಗಿದೆ. ಈ ಕುಟುಂಬವು ಹಲವಾರು ವರ್ಷಗಳಿಂದ ಹರಿಯಾಣದ ಪಾಣಿಪತ್ನಲ್ಲಿ ವಾಸಿಸುತ್ತಿತ್ತು. ಮನೆಯ ಸದಸ್ಯರೆಲ್ಲ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಂತ್ರಸ್ತ ಮಹಿಳೆಯರು ನೀಡಿರುವ ದೂರಿನನ್ವಯ, ನಾಲ್ವರು ಯುವಕರು ರಾತ್ರಿ ಒಂದು ಗಂಟೆ ಸುಮಾರಿಗೆ ಅವರ ಮನೆಗೆ ಏಕಾಏಕಿ ನುಗ್ಗಿದ್ದಾರೆ. ಮನೆಗೆ ನುಗ್ಗಿದ ತಕ್ಷಣ ಸಂತ್ರಸ್ತ ಮಹಿಳೆಯರ ಗಂಡಂದಿರನ್ನು ಹಗ್ಗದಿಂದ ಕಟ್ಟಿ ಕೋಣೆಯಲ್ಲಿ ಕೂಡಿ ಹಾಕಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಎಲ್ಲಾ ಆರೋಪಿಗಳು ಮುಖಕ್ಕೆ ಕರವಸ್ತ್ರವನ್ನು ಕಟ್ಟಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಸುಮಾರು ಎರಡೂವರೆ ಗಂಟೆಗಳ ಕಾಲ ಆರೋಪಿಗಳು ತಮಗೆ ಲೈಂಗಿಕ ಕಿರುಕುಳ ನೀಡಿದರು ಎಂದು ಸಂತ್ರಸ್ತ ಮಹಿಳೆಯರು ಹೇಳಿದ್ದಾರೆ. ಆ ಅವಧಿಯಲ್ಲಿ, ಅವರ ಕುಟುಂಬ ಸದಸ್ಯರನ್ನು ಹಗ್ಗದಿಂದ ಕಟ್ಟಿ ಹಾಕಲಾಗಿತ್ತು. ನಂತರ ಬೆಳಗಿನ ಜಾವ ಐದು ಗಂಟೆಗೆ ಸಂತ್ರಸ್ತ ಮಹಿಳೆಯರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಸಂತ್ರಸ್ತ ಮಹಿಳೆಯರ ಕುಟುಂಬ ಸದಸ್ಯರನ್ನು ಕೊಠಡಿಯಿಂದ ಹೊರಗೆ ಕರೆದೊಯ್ದಿದ್ದಾರೆ.
ಅಚ್ಚರಿಯ ವಿಷಯ ಎಂದರೆ, ಸಾಮೂಹಿಕ ಅತ್ಯಾಚಾರದ ಘಟನೆ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಈ ಆರೋಪಿಗಳು ಅಸ್ವಸ್ಥ ಮಹಿಳೆಯ ಮೇಲೂ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ.ಅಲ್ಲದೇ ಅಸ್ವಸ್ಥ ಮಹಿಳೆಯ ಪತಿಯ ಬಳಿ ಇದ್ದ ಮೊಬೈಲ್ ಹಾಗೂ ನಗದನ್ನು ದರೋಡೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಪತ್ನಿಯನ್ನು ಕಳೆದುಕೊಂಡ ಮಹೇಂದ್ರ ಎಂಬುವರು, ಆರೋಪಿಗಳು ಕತ್ತಿಗೆ ಕತ್ತಿ ಇಟ್ಟು ಮನೆ ದೋಚಿದ್ದಾರೆ. ಮಹೇಂದ್ರ ಕೂಡ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಒಂದೆಡೆ ಆರೋಪಿಗಳು ಅದೇ ಊರಿನವರು ಆಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ವಿನೋದ್ ಕುಮಾರ್, ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.