ಬಿಹಾರ: ಇತ್ತೀಚೆಗಷ್ಟೇ ಕರ್ನಾಟಕದ ಧಾರವಾಡ ಜಿಲ್ಲೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಗುವನ್ನು ಅಂತ್ಯಕ್ರಿಯೆಗೆ ಕರೆದೊಯ್ದಾಗ ಮಸಣದಲ್ಲಿ ಅದು ಉಸಿರಾಡಿದ್ದ ಘಟನೆ ನಡೆದಿತ್ತು. ಇದೀಗ ಬಿಹಾರದಲ್ಲಿ ಮತ್ತೊಂದು ಅಚ್ಚರಿಯ ಘಟನೆ ನಡೆದಿದೆ. ಮೃತ ಮಗಳಿಂದ ಪೋಷಕರಿಗೆ ವಿಡಿಯೋ ಕಾಲ್ ಬಂದಿದೆ.
ಮಗಳು ಸಾವನ್ನಪ್ಪಿದ್ದಾಳೆ ಎಂಬ ದುಃಖದಲ್ಲಿ ಪೋಷಕರಿದ್ದಾರೆ. ಈ ವೇಳೆ ಅವರಿಗೆ ಅಪರಿಚಿತ ಫೋನ್ ನಂಬರ್ನಿಂದ ವಿಡಿಯೋ ಕರೆ ಬಂದಿದೆ. ಕಾಲ್ ರಿಸೀವ್ ಮಾಡಿದಾಗ ಅವರಿಗೆ ಕಾಣಿಸಿದ್ದು ತಮ್ಮ ಮಗಳು. ಈ ಘಟನೆ ನಡೆದಿರುವುದು ಬಿಹಾರದ ರಾಜಧಾನಿ ಪಾಟ್ನಾದ ಅಕ್ಟರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ .
ತಂದೆಗೆ ವಿಡಿಯೋ ಕರೆ ಮಾಡಿದ ಮಗಳು “ಅಪ್ಪ, ನಾನು ಇನ್ನೂ ಜೀವಂತವಾಗಿದ್ದೇನೆ.” ಎಂದು ಹೇಳಿದ್ದಾಳೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಮೃತಪಟ್ಟಿದ್ದು ಬೇರೆ ಯುವತಿ ಎಂಬುದು ತಿಳಿದು ಬಂದಿದೆ. ಅಷ್ಟಕ್ಕೂ ಎಲ್ಲಿ ಏನಾಯಿತು? ತಿಳಿಯೋಣ ಬನ್ನಿ..
ಕಳೆದೊಂದು ತಿಂಗಳ ಹಿಂದೆ ತಮ್ಮ ಮಗಳು ಕಾಣೆಯಾಗಿರುವುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಜೊತೆ ಪೋಷಕರು ಕೂಡ ಸಾಕಷ್ಟು ಕಡೆ ಆಕೆಯನ್ನು ಹುಡುಕಿದ್ದಾರೆ. ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ
ಪೋಸ್ಟ್ ಕೂಡ ಮಾಡಿದ್ದಾರೆ. ಕೆಲ ದಿನಗಳ ಬಳಿಕ ನಾಲೆಯೊಂದರಲ್ಲಿ ಯುವತಿ ಶವ ಪತ್ತೆಯಾಗಿತ್ತು. ಮೃತದೇಹ ಕೊಳೆತಿದ್ದರಿಂದ ಪೋಷಕರಿಗೆ ಆಕೆಯನ್ನು ಗುರುತಿಸಲಾಗಲಿಲ್ಲ. ಮೃತದೇಹದ ಮೇಲಿದ್ದ ಬಟ್ಟೆಯನ್ನು ಆಧರಿಸಿ ಅದು ತಮ್ಮ ಮಗಳೆಂದು ಭಾವಿಸಿದ್ದರು. ಹೀಗಾಗಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ನೆರವೇರಿಸಿದ್ದರು.
ಈ ಸುದ್ದಿಯನ್ನು ತಿಳಿದ ಮಗಳು ತಂದೆಗೆ ಕರೆ ಮಾಡಿ ನಾನು ಬದುಕಿದ್ದೇನೆ, ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು ಓಡಿ ಹೋಗಿರುವುದಾಗಿ ತಿಳಿಸಿದ್ದಾಳೆ. ಆಕೆ ತನ್ನ ಪ್ರಿಯತಮನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಪ್ರಸ್ತುತ ತನ್ನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದಾಳೆ ಎಂದು ಅಕ್ಟರ್ಪುರ ಎಸ್ಎಚ್ಒ ಸೂರಜ್ ಪ್ರಸಾದ್ ತಿಳಿಸಿದ್ದಾರೆ.
ಹಾಗಾದರೆ ಅಂದು ಸಿಕ್ಕಿದ್ದು ಯಾರ ಮೃತದೇಹ? ಯಾರು ಕೊಲೆ ಮಾಡಿದ್ದು? ಎಂಬ ಕುರಿತು ವಿವರ ಸಂಗ್ರಹಿಸಲಾಗುತ್ತಿದೆ. ಇದೊಂದು ಮರ್ಯಾದಾ ಹತ್ಯೆ, ಯುವತಿಯನ್ನು ಆಕೆಯ ಪೋಷಕರೇ ಕೊಂದು ಶವವನ್ನು ಬಿಸಾಕಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.