ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ ನಡುವೆ ಗಾಜಾ ಪಟ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಪ್ಯಾಲೆಸ್ತೀನಿಯರಿಗೆ ಭಾರತ ಮಾನವೀಯ ನೆರವು ಕಳುಹಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು, ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರೊಂದಿಗೆ ಮಾತನಾಡಿ ಮಾನವೀಯ ನೆರವು ಕಳಿಸುವ ಭರವಸೆ ನೀಡಿದ್ದರು.
ಅಲ್ಲದೇ ಈ ನೆರವು ದೀರ್ಘಕಾಲ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಮೊದಲ ಹಂತವಾಗಿ ಸುಮಾರು 6.5 ಟನ್ ವೈದ್ಯಕೀಯ ಸಾಮಗ್ರಿಗಳ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಅದು ಈಜಿಪ್ಟ್ ಮೂಲಕ ದೇಶವನ್ನು ತಲುಪಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 6.5 ಟನ್ ವೈದ್ಯಕೀಯ ಸಾಮಗ್ರಿಗಳ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ C-17 ವಿಮಾನವು ಈಜಿಪ್ಟ್ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ.
ವಸ್ತುಗಳನ್ನು ಈಜಿಪ್ಟ್ ಮತ್ತು ಗಾಜಾ ನಡುವಿನ ರಫಾ ಗಡಿಯ ಮೂಲಕ ಪ್ಯಾಲೆಸ್ತೀನ್ಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಭಾರತದಿಂದ ನೀಡಲಾಗುತ್ತಿರುವ ಮಾನವೀಯ ನೆರವು ಜೀವ ಉಳಿಸುವ ಅಗತ್ಯ ಔಷಧಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಟೆಂಟ್ಗಳು, ಮಲಗುವ ಚೀಲಗಳು, ಟಾರ್ಪಾಲಿನ್ಗಳು, ನೈರ್ಮಲ್ಯ ಉಪಯುಕ್ತತೆಯ ವಸ್ತುಗಳು ಹಾಗೂ ನೀರು ಶುದ್ಧೀಕರಣ ಮಾತ್ರೆಗಳು ಇತರ ಅಗತ್ಯ ವಸ್ತುಗಳನ್ನು ಒಳಗೊಂದಿದೆ. ಇತ್ತೀಚೆಗೆ ಗಾಜಾ ಪಟ್ಟಿಯ ಆಸ್ಪತ್ರೆಯೊಂದರ ಮೇಲೆ ನಡೆದ ಬಾಂಬ್ ದಾಳಿಗೆ ಸಾಕಷ್ಟು ಜೀವಗಳು ಬಲಿಯಾಗಿದ್ದವು. ದಾಳಿಯಲ್ಲಿ ಮೃತರಿಗೆ ಸಂತಾಪ ಸೂಚಿಸಿದ್ದ ಪ್ರಧಾನಿ ಮೋದಿ ಅವರು, ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.