ಕಲಬುರಗಿ: ಪ್ರೀತಿಸಿ ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರುವ ಗೃಹಿಣಿಯನ್ನು ಪತಿಯ ಕುಟುಂಬಸ್ಥರು ಕೊಲೆ ಮಾಡಿ ವಿದ್ಯುತ್ ಶಾಕ್ನಿಂದ ಸಾವಿಗೀಡಾಗಿದ್ದಾಳೆಂದು ಬಿಂಬಿಸಿರುವ ಘಟನೆ ಕಲಬುರಗಿ ನಗರದ ಕೋಟನೂರನಲ್ಲಿ ನಡೆದಿದೆ.
ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಭಾಗ್ಯಶ್ರೀ (19) ಎಂಬ ಯುವತಿ ಮೃತಪಟ್ಟ ನತದೃಷ್ಟೆ ಎಂದು ತಿಳಿದು ಬಂದಿದೆ.
ಕಲಬುರಗಿ ನಗರದ ಕೋಟನೂರು ಬಳಿ ಬಾಡಿಗೆ ಮನೆಯಲ್ಲಿ ಪತಿಯ ಜೊತೆ ವಾಸವಾಗಿದ್ದ ಭಾಗ್ಯಶ್ರೀ ಪತಿಯ ಕುಟುಂಬಸ್ಥರ ಸಂಚಿಗೆ ಬಲಿಯಾಗಿದ್ದಾಳೆ. ಬುಧವಾರ ಮಧ್ಯಾಹ್ನ ಭಾಗ್ಯಶ್ರೀ ಕುಟುಂಬದವರಿಗೆ ಪತಿ ಮನೆಯವರು ಪೋನ್ ಮಾಡಿ, ಭಾಗ್ಯಶ್ರೀ ಮೃತಪಟ್ಟಿರೋದಾಗಿ ಹೇಳಿದ್ದಾರೆ. ಹೀಗಾಗಿ ಭಾಗ್ಯಶ್ರೀ ಹೆತ್ತವರು ಮತ್ತು ಕುಟುಂಬದವರು ಕಲಬುರಗಿ ನಗರಕ್ಕೆ ಧಾವಿಸಿ ಬಂದಿದ್ದರು. ಆದರೆ, ಮೈ ಮೇಲೆ ಕೆಲವಡೆ ಗಾಯದ ಗುರುತುಗಳು ಇರುವುದರಿಂದ ಭಾಗ್ಯಶ್ರೀ ವಿದ್ಯುತ್ ಶಾಕ್ನಿಂದ ಮೃತಪಟ್ಟಿಲ್ಲ, ಬದಲಾಗಿ ಆಕೆಯ ಪತಿ ಮತ್ತು ಕುಟುಂಬದವರೆ ಕೊಲೆ ಮಾಡಿ, ಕರೆಂಟ್ ಶಾಕ್ ಹೊಡಿಸಿ ಸಾಯಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಇನ್ನು ಯಾದಗಿರಿ ಜಿಲ್ಲೆಯ ಹರಳಹಳ್ಳಿ ಗ್ರಾಮದ ಭಾಗ್ಯಶ್ರೀಯದು ಪ್ರೇಮ ವಿವಾಹವಾಗಿತ್ತು. ಅದೇ ಗ್ರಾಮದ ಶಂಕರಗೌಡ ಮತ್ತು ಭಾಗ್ಯಶ್ರೀ ನಡುವೆ ಪ್ರೀತಿ ಮೂಡಿತ್ತು. ಆದರೆ, ಜಾತಿ ಬೇರೆ ಬೇರೆಯಾಗಿದ್ದರಿಂದ ಮನೆಯವರು ವಿರೋಧ ವ್ಯಕ್ತಪಡಿಸಿರುವುದರಿಂದ ಇಬ್ಬರು ಮನೆ ಬಿಟ್ಟು ಹೋಗಿ ಭಾಗ್ಯಶ್ರೀಗೆ ಹದಿನೆಂಟು ವರ್ಷವಾದ ಮೇಲೆ ವಾಪಸ್ ಬಂದಿದ್ದರಂತೆ. ಈ ಬಗ್ಗೆ ಯಾದಗಿರಿ ಜಿಲ್ಲೆಯ ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಕೂಡ ಭಾಗ್ಯಶ್ರೀ ಹೆತ್ತವರು ತಮ್ಮ ಜೊತೆ ಬಂದು ಬಿಡು ಎಂದು ಮಗಳಿಗೆ ಹೇಳಿದ್ದರು. ಆದರೆ ತಾನು ಬದುಕಿದರೆ ಶಂಕರಗೌಡನ ಜೊತೆಯೇ ಎಂದು ಭಾಗ್ಯಶ್ರೀ ಹೇಳಿರುವುದರಿಂದ ಆಕೆಯ ಹೆತ್ತವರು ಬದುಕು ಕೊಟ್ಟಿಕೊಳ್ಳಲಿ ಬಿಡುವೆಂದು ಬಿಟ್ಟಿದರಂತೆ.
ಕಲಬುರಗಿಯ ಕೋಟನೂರ್ ಬಳಿ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದ ಭಾಗ್ಯಶ್ರೀ ಈಗಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಮಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹೆತ್ತವರನ್ನು ಕಂಗಾಲು ಮಾಡಿದೆ. ಸದ್ಯ ಭಾಗ್ಯಶ್ರೀ ಸಾವಿಗೆ ಸಂಬಂಧಿಸಿದಂತೆ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಅಸಹಹಜ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ಭಾಗ್ಯಶ್ರೀ ಪತಿ ಶಂಕರಗೌಡನನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸುತ್ತಿದ್ದಾರೆ. ವಿಚಾರಣೆ ನಂತರವೇ ಭಾಗ್ಯಶ್ರೀ ಕರೆಂಟ್ ಶಾಕ್ನಿಂದ ಮೃತಪಟ್ಟಿದಾಳೋ ಅಥವಾ ಕೊಲೆ ಎಂಬುದು ಗೊತ್ತಾಗಲಿದೆ.