ರಾಯಚೂರು : ಲಿಂಗಸುಗೂರು ಪಟ್ಟಣದಲ್ಲಿ ನಿನ್ನೆ ರಾತ್ರಿ ವೃದ್ಧೆಯೋರ್ವರಿಗೆ ಬಾಯಿಗೆ ಬಟ್ಟೆ ಇಟ್ಟು ಹಲ್ಲೆ ನಡೆಸಿ ಕಿವಿ ಓಲೆ ಕಿತ್ತುಕೊಂಡು ಹೋದ ಅಮಾನವೀಯ ಘಟನೆ ನಡೆದಿದೆ.
ಪಾರ್ವತಮ್ಮ, ಹಲ್ಲೆಗೊಳಗಾದ ವೃದ್ಧೆ. ಪಾರ್ವತಮ್ಮ ಮನೆಯಲ್ಲಿ ಒಬ್ಬರೇ ಇರುತ್ತಿದ್ದದನ್ನು ಗಮನಿಸಿದ್ದ ಇಬ್ಬರು ಖದೀಮರು ನಿನ್ನೆ ರಾತ್ರಿ ಏಕಾಏಕಿ ಪಾರ್ವತಮ್ಮಳ ಮನೆಗೆ ನುಗ್ಗಿ ಬಾಯಿಗೆ ಬಟ್ಟೆ ಇಟ್ಟು, ಬಳಿಕ ಹಲ್ಲೆ ನಡೆಸಿ ನಂತರ ಆಕೆ ಕೊರಳಿದ್ದ ಬೋರಮಾಳ, ಕಿವಿ ಓಲೆ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಪಾರ್ವತಮ್ಮನವರು ಕಿರುಚಾಡಿದ್ದು ಸ್ಥಳೀಯರು ಸಹಾಯಕ್ಕೆ ಧಾವಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡ ಲಿಂಗಸುಗೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕಿವಿ ಓಲೆ ಕಿತ್ತು ಕೊಂಡ ಹಿನ್ನೆಲೆ ವೃದ್ಧೆ ಕಿವಿಗಳಿಗೆ ಗಾಯಗಳಾಗಿದ್ದು ವೃದ್ಧೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಕ್ತಸಿಕ್ತವಾಗಿ ಗಾಯವಾಗಿರೊ ಕಿವಿಗಳಿಗೆ ವೈದ್ಯರು ಸ್ಟಿಚ್ ಹಾಕಿದ್ದಾರೆ. ವೃದ್ಧೆ ಪಾರ್ವತಮ್ಮ ಹೇಳಿಕೆ ಪಡೆದು ಲಿಂಗಸುಗೂರು ಪೊಲೀಸರು ತನಿಖೆಗೆ ಇಳಿದಿದ್ದಾರೆ.