ಬಾಗಲಕೋಟೆ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಸಂಗಾಪುರ ಗ್ರಾಮದ 22 ವರ್ಷದ ಗೋಪಾಲ ಕುರಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದ 25 ವರ್ಷದ ಸಚಿನ ಪಾಟೀಲ ಬಂಧಿತ ಆರೋಪಿತರು.
ಬೈಕ್ ಖದೀಮರು ಕಳ್ಳತನ ಮಾಡಿದ್ದ ಸುಮಾರು 5,85,000 ಮೌಲ್ಯದ ಒಟ್ಟು 11 ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರಲ್ಲಿ 5 ಹೆಚ್ ಎಫ್ ಡಿಲಕ್ಸ್ ಬೈಕ್, 4 ಸ್ಪ್ಲೆಂಡರ್ ಪ್ಲಸ್ ಬೈಕ್, 2 ಪಲ್ಸರ್ ಬೈಕ್ ಗಳಿವೆ. ಇತ್ತೀಚೆಗೆ ಬಾಗಲಕೋಟೆ ತಾಲ್ಲೂಕಿನ ಭಗವತಿ ಗ್ರಾಮದ ಮುತ್ತಪ್ಪ ಕಂಬಾರ ಎನ್ನುವವರ ಬೈಕ್ ಮನೆ ಮುಂದೆ ನಿಲ್ಲಿಸಿದ್ದಾಗಲೇ ಕಳ್ಳತನ ಆಗಿತ್ತು. ಈ ಕುರಿತು ಮುತ್ತಪ್ಪ ಅವರಿಂದ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಸಂಶಯಾಸ್ಪದ ಮೇಲೆ ಆರೋಪಿಗಳಾದ ಗೋಪಾಲ್ ಹಾಗೂ ಸಚಿನ್ ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನದ ಎಲ್ಲ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ಈ ಪ್ರಕರಣದಲ್ಲಿ ಕಾರ್ಯ ನಿರ್ವಹಿಸಿದ ಡಿವೈಎಸ್ಪಿ ಪಂಪನಗೌಡ, ಸಿಪಿಐ ಎಚ್.ಆರ್.ಪಾಟೀಲ, ಗ್ರಾಮೀಣ ಠಾಣೆಯ ಪಿಎಸ್ಐ ಶರಣಬಸಪ್ಪ ಸಂಗಳದ ಸೇರಿದಂತೆ ಬಾಗಲಕೋಟೆ ಗ್ರಾಮೀಣ ಠಾಣೆಯ ಪೊಲೀಸರ ಕಾರ್ಯಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನಕುಮಾರ್ ದೇಸಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.