ಬೆಂಗಳೂರು: ಗಿಫ್ಟ್ ವೋಚರ್ ವೆಬ್ಸೈಟ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಲಪಟಾಯಿಸಿದ್ದ ಹ್ಯಾಕರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಹಕರಿಗೆ ಕೊಡುವ ಆನ್ಲೈನ್ ಗಿಫ್ಟ್ ವೋಚರ್ಗಳನ್ನು ಹ್ಯಾಕ್ ಮಾಡಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಿದ್ದ ಯುವಕ ಸೆರೆಯಾಗಿದ್ದ, ಆತನಿಂದ 11 ಲಕ್ಷ ನಗದು, ಚಿನ್ನ, ಬೆಳ್ಳಿ ಗಟ್ಟಿ, ಏಳು ಬೈಕ್ ಸೇರಿ 4.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸೀಮಾಂಧ್ರದ ಚಿತ್ತೂರು ಮೂಲದ ಲಕ್ಷ್ಮೀಪತಿ ಬಂಧಿತ ಆರೋಪಿ. ಒಂಗೋಲು ಐಐಐಟಿ ಸಂಸ್ಥೆಯ ಬಿ.ಟೆಕ್ ಪದವೀಧರನಾಗಿರುವ ಈತ ತನ್ನ ನೈಪುಣ್ಯವನ್ನು ವಂಚನೆಗೆ ಬಳಸಿದ್ದಾನೆ. ಗ್ರಾಹಕರಿಗೆ ಕೊಡುವ ವೋಚರ್ಗಳು ಹ್ಯಾಕ್ ಆಗಿರುವ ಬಗ್ಗೆ ರಿವಾರ್ಡ್ 360 ಸಂಸ್ಥೆಯಿಂದ ಆಗ್ನೇಯ ಸೈಬರ್ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ತನಿಖೆ ವೇಳೆ ಆಂಧ್ರ ಮೂಲದ ವ್ಯಕ್ತಿ ಕೃತ್ಯ ಎಸಗಿರುವುದು ತಿಳಿದುಬಂದಿತ್ತು. ಹೀಗಾಗಿ ಆರೋಪಿ ಲಕ್ಷ್ಮೀಪತಿಯನ್ನು ಪೊಲೀಸರು ಬಂಧಿಸಿ, ಆತನಿಂದ 3.40 ಕೋಟಿ ರೂ. ಮೌಲ್ಯದ 5 ಕೆ.ಜಿ ಚಿನ್ನ, 21.80 ಲಕ್ಷ ರೂ. ಮೌಲ್ಯದ 27.250 ಕೆ.ಜಿ ಬೆಳ್ಳಿ, 11 ಲಕ್ಷ ರೂ., ಪ್ಲಿಫ್ ಕಾರ್ಟ್ ವ್ಯಾಲೆಟ್ನ 26 ಲಕ್ಷ ರೂ., ಅಮೆಜಾನ್ ವ್ಯಾಲೆಟ್ನ 3.50 ಲಕ್ಷ ರೂ., 7 ದ್ವಿಚಕ್ರ ವಾಹನ ಸೇರಿ ಒಟ್ಟು 4.16 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆಗ್ನೇಯ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.