ಬೆಂಗಳೂರು: ಭ್ರಷ್ಟರ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಗೆ ಇನ್ನಷ್ಟು ಚುರುಕು ನೀಡಿದ್ದು, ಬೆಂಗಳೂರಿನ 10 ಕಡೆ ಸೇರಿದಂತೆ ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದು, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ದೂರು ದಾಖಲಾಗಿರುವ ಹಿನ್ನೆಲೆ ಈ ದಾಳಿಯಾಗಿದೆ. ರಾಜ್ಯದ ರಾಜಧಾನಿಯಲ್ಲಿ ನಾಲ್ಕು ಎಫ್ಐಆರ್ ಸಂಬಂಧ ಹತ್ತು ಕಡೆಗಳಲ್ಲಿ ಲೋಕಾಯುಕ್ತ ದಾಳಿಯಾಗಿದೆ. ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಮಹದೇವಪುರ ವಲಯದ RI ನಟರಾಜ್ ಮನೆಯ ಮೇಲೂ ದಾಳಿಯಾಗಿದೆ. ಈ ಹಿಂದೆ ಹಣ ಪಡೆಯುವಾಗ ಈ ನಟರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ನಟರಾಜ್ ಅವರ ಬನಶಂಕರಿಯ ನಿವಾಸದ ಮೇಲೆ ಲೋಕಾ ಪೊಲೀಸರು ದಾಳಿ ಮಾಡಿದ್ದಾರೆ.
ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕೆ.ಮಹೇಶ್ ಮನೆ ಮೇಲೂ ದಾಳಿಯಾಗಿದೆ. ಮಹೇಶ್ ಅವರ ಪತ್ನಿ ಎಚ್. ಭಾರತಿ BBMP ಎಇ ಆಗಿದ್ದಾರೆ. ದಾವಣಗೆರೆ ನಗರದ ಜಯನಗರದಲ್ಲಿನ ಮಹೇಶ್ ಅವರ ಮನೆ ಮೇಲೆ ದಾಳಿಯಾಗಿದೆ. ಮಹೇಶ್ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಎಚ್. ಭಾರತಿ ಅವರ ಬೆಂಗಳೂರಿನ BBMP ಕಚೇರಿ ಮೇಲೂ ದಾಳಿಯಾಗುವ ಸಾಧ್ಯತೆ ಇದೆ.
ಲೋಕಾಯುಕ್ತ ಎಸ್ಪಿ ವಾಸುದೇವರಾವ್ ಹಾಗೂ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಡತಗಳ ಪರಿಶೀಲನೆ ನಡೆಯುತ್ತಿದೆ. ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯಲ್ಲಿ ಸಿಬ್ಬಂದಿ ಬಂದ ನಂತರ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸಲಿದ್ದಾರೆ. ಸದ್ಯ ದಾವಣಗೆರೆ ಮನೆಯಲ್ಲಿ 15 ಲಕ್ಷ ನಗದು ಹಾಗೂ ಅರ್ಧ ಕೆಜಿ ಬಂಗಾರ ಸಿಕ್ಕಿರುವ ಸಾಧ್ಯತೆ ಇದೆ. ಅಪರ ಜಿಲ್ಲಾಧಿಕಾರಿಗೆ ಲೋಕಾ ಬಿಸಿ
ಕೊಡಗಿನಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರ ಮನೆ ಮೇಲೆ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಮೂವರು ಇನ್ಸ್ಪೆಕ್ಟರ್ ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿ ದಾಳಿ ಮಾಡಿದ್ದಾರೆ. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿದೆ. ಮಡಿಕೇರಿಯ ಕಾರ್ಯಪ್ಪ ವೃತ್ತದ ಬಳಿಯಿರುವ ನಂಜುಂಡೇಗೌಡರ ವಸತಿಗೃಹದ ಮೇಲೆ ದಾಳಿಯಾಗಿದ್ದು, ಕಡತಗಳ ಪರಿಶೀಲನೆ ನಡೆಯುತ್ತಿದೆ. ಪಿರಿಯಾಪಟ್ಟಣ ತಾಲೂಕಿನ ಮಾಕನಳ್ಳಿಯಲ್ಲಿರುವ ಮಾವನ ಮನೆ ಹಾಗೂ ಮೈಸೂರಿನಲ್ಲಿರುವ ಭಾವನ ಮನೆಯಲ್ಲೂ ಶೋಧ ಕಾರ್ಯ ನಡೆಯುತ್ತಿದೆ. ಮಡಿಕೇರಿ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ. ನಂಜುಂಡೇಗೌಡ ಅವರ ಮನೆ ಜಿಲ್ಲಾಧಿಕಾರಿ ಮನೆ ಸಮೀಪವೇ ಇದೆ. ಪೊಲೀಸ್ ಕಾನ್ಸ್ಟೆಬಲ್ ಮನೆ ಮೇಲೆ ದಾಳಿ ಬೀದರ್ನಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪೊಲೀಸ್ ಕಾನ್ಸ್ಟೆಬಲ್ ವಿಜಯಕುಮಾರ್ ಎಂಬುವರ ಮನೆ ಮೇಲೆ ದಾಳಿ ನಡೆದಿದೆ, ವಿಜಯಕುಮಾರ್ ಚಿಟಗುಪ್ಪ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಂಬಂಧಿಸಿದ ಹುಮ್ನಾಬಾದ ಪಟ್ಟಣದ ಟೀಚರ್ ಕಾಲೋನಿ ಹಾಗೂ ಹುಚಕನಳ್ಳಿ ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪವಿದ್ದು, ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶಿಲನೆ ಮಾಡುತ್ತಿದ್ದಾರೆ. ಡಿವೈಎಸ್ಪಿ ಓಲೇಕಾರ ನೇತೃತ್ವದಲ್ಲಿ ದಾಳಿಯಾಗಿದೆ.
ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತರಿಗೆ ಶಾಕ್ ಧಾರವಾಡದಲ್ಲಿಯೂ ಲೋಕಾಯುಕ್ತ ದಾಳಿ ನಡೆದಿದೆ. ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಅವರ ಧಾರವಾಡದ ನಿವಾಸದ ಮೇಲೆ ದಾಳಿಯಾಗಿದೆ. ನಗರದ ಸಪ್ತಾಪುರ ಬಡಾವಣೆಯ ಮಿಚಿಗನ್ ಲೇಔಟ್ನಲ್ಲಿ ಆನಿಶೆಟ್ಟರ್ ನಿವಾಸ ಇದೆ. ಆನಿಶೆಟ್ಟರ್ ಈ ಮೊದಲು ಹು-ಧಾ ಪಾಲಿಕೆಯಲ್ಲಿದ್ದರು. ಕೆಲ ವರ್ಷಗಳ ಹಿಂದಷ್ಟೇ ಬೆಳಗಾವಿಗೆ ವರ್ಗಾವಣೆ ಆಗಿದ್ದರು. ಮನೆಯಲ್ಲಿ ದಾಖಲೆಗಳ ಪರಿಶೀಲನೆ ಆರಂಭವಾಗಿದೆ. ಮನೆ, ಲಾಡ್ಜ್ ಮೇಲೆ ದಾಳಿ ಕೊಪ್ಪಳದಲ್ಲಿ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ್ ಬನ್ನಿಕೊಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಗರದ ಮಂಗಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಮನೆ, ನಿರ್ಮಿತಿ ಕೇಂದ್ರ ಹಾಗೂ ಹುಲಗಿಯಲ್ಲಿನ ಲಾಡ್ಜ್ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ರಾಯಚೂರು ಲೋಕಾಯುಕ್ತ ಎಸ್ಪಿ ಆರ್.ಎಲ್ ಅರಸಿದ್ದಿ ನೇತೃತ್ವದಲ್ಲಿ ದಾಳಿ ನಡೆದಿದೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ನಾಗರಾಜು ಮನೆ ಮೇಲೆ ದಾಳಿಯಾಗಿದೆ. ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಟೂಡಾ ಕಚೇರಿ ಮೇಲೆ ಹಾಗೂ ಅರಸಿಕೆರೆಯ ನಿವಾಸದ ಮೇಲೂ ದಾಳಿಯಾಗಿದೆ. ಇಂದು ಬೆಳಗ್ಗೆ 6 ಗಂಟೆಗೆ ಒಟ್ಟು ಒಟ್ಟು ಮೂರು ತಂಡದಿಂದ ದಾಳಿಯಾಗಿದೆ.