ಮುಂಬಯಿ: ಟಾಟಾ ಸಮೂಹದ ಗೌರವಾಧ್ಯಕ್ಷರಾಗಿರುವ 85 ವರ್ಷದ ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ಮಾಯಾ ಟಾಟಾ ನೇಮಕಗೊಳ್ಳುವ ಸಾಧ್ಯತೆ ಇದೆ. ಆ. 29ರಂದು ನಡೆಯಲಿರುವ ಟಾಟಾ ಸಮೂಹದ ವಾರ್ಷಿಕ ಮಹಾಸಭೆಯಲ್ಲಿ ಮಾಯಾ ಹೆಸರು ಘೋಷಣೆಯಾಗಬಹುದು ಎಂದು ಮಾಧ್ಯಮ ವರದಿಗಳು ಹೇಳಿವೆ.
ಮಾಯಾ ಟಾಟಾ ರತನ್ ಟಾಟಾ ಅವರ ಮಲಸೋದರ ನಿಯೋಲ್ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಪುತ್ರಿಯಾಗಿದ್ದಾರೆ. 34 ವರ್ಷದ ಮಾಯಾ ಟಾಟಾ ಇತ್ತೀಚೆಗಷ್ಟೇ ಟಾಟಾ ಮೆಡಿಕಲ್ ಸೆಂಟರ್ಟ್ರಸ್ಟ್ನ ಆಡಳಿತ ಮಂಡಳಿ ಸೇರಿದ್ದರು. ಸಾರ್ವಜನಿಕವಾಗಿ ಅಷ್ಟೇನೂ ಕಾಣಿಸಿಕೊಳ್ಳದ ಮಾಯಾ ಅವರು, ಇತ್ತೀಚೆಗೆ ನಿಧನರಾದ ಟಾಟಾ ಸಮೂಹದ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರ ಸಹೋದರಿಯೂ ಹೌದು.
ಬೃಹತ್ ಕಂಪನಿ ಟಾಟಾ ಗ್ರೂಪ್ ಉತ್ತರಾಧಿಕಾರಿ ಯಾರೆಂಬ ಕುತೂಹಲ ಹಲವು ವರ್ಷಗಳಿಂದ ಇದೆ. 20.71 ಲಕ್ಷ ಕೋಟಿ ರೂ. ಮೌಲ್ಯದ ಸಾಮ್ರಾಜ್ಯವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಗುವ ಸಾಧ್ಯತೆ ಇದೆ.
ಯಾರೀಕೆ ಮಾಯಾ ಟಾಟಾ?
ರತನ್ ಟಾಟಾ ಅವರ ಮಲಸೋದರ ನಿಯೋಲ್ ಟಾಟಾ ಅವರಿಗೆ ಮೂವರು ಮಕ್ಕಳು. ಇವರಲ್ಲಿ ಮಾಯಾ ಟಾಟಾ ಕಿರಿಯವಳು.
ಮಾಯಾ ಅವರು ಈಗಾಗಲೇ ಟಾಟಾ ಗ್ರೂಪ್ನೊಂದಿಗೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವರದಿಯ ಪ್ರಕಾರ ಅವರು ಬ್ರಿಟನ್ನ ಬೇಯರ್ಸ್ ಬ್ಯುಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
ಮಾಯಾ ಅವರ ತಾಯಿ ಆಲೂ ಮಿಸ್ತ್ರಿಯವರು ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಹೋದರಿ ಮತ್ತು ದಿವಂಗತ ಬಿಲಿಯನೇರ್ ಪಲ್ಲೊಂಜಿ ಮಿಸ್ತ್ರಿ ಅವರ ಪುತ್ರಿ, ಕುತೂಹಲಕಾರಿಯಾಗಿ ಮಾಯಾ ಟಾಟಾ ಅವರ ಚಿಕ್ಕಮ್ಮನಾಗಿರುವ ಸೈರಸ್ ಮಿಸ್ತ್ರಿ ಅವರ ಪತ್ನಿ ರೋಹಿಕಾ ಮಿಸ್ತ್ರಿ ಅವರು 56,000 ಕೋಟಿ ರೂ. ನಿವ್ವಳ ಮೌಲ್ಯದ ಆಸ್ತಿ ಹೊಂದಿದ್ದಾರೆ. ಈಕೆ ಭಾರತದ ಎರಡನೇ ಶ್ರೀಮಂತ ಮಹಿಳೆಯಾಗಿದ್ದಾರೆ.
ತನ್ನ ವೃತ್ತಿಜೀವನವನ್ನು ಟಾಟಾ ಆಪರ್ಚುನಿಟೀಸ್ ಫಂಡ್ನೊಂದಿಗೆ ಪ್ರಾರಂಭಿಸಿದ್ದರು ಮಾಯಾ ಟಾಟಾ, ಮುಚ್ಚುವವರೆಗೂ ಇದು ಟಾಟಾ ಗ್ರೂಪ್ ಅಂಗಸಂಸ್ಥೆಯಾದ ಟಾಟಾ ಕ್ಯಾಪಿಟಲ್ನ ಅತ್ಯಂತ ಹಳೆಯ ಖಾಸಗಿ ಇಕ್ವಿಟಿ ಫಂಡ್ ಆಗಿತ್ತು. ನಂತರ ಅವರು ಟಾಟಾ ಡಿಜಿಟಲ್ಗೆ ತೆರಳಿದ್ದರು. ಇವರು ಟಾಟಾ ಡಿಜಿಟಲ್ನಲ್ಲಿದ್ದ ಸಮಯದಲ್ಲಿಯೇ ಸಂಸ್ಥೆಯು ಟಾಟಾ ನ್ಯೂ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತ್ತು. ಮಾಯಾ ಈ ಹಿಂದೆ ನಿಧಿಯೊಂದರಲ್ಲಿ ಬಂಡವಾಳ ನಿರ್ವಹಣೆ ಮತ್ತು ಹೂಡಿಕೆದಾರರ ಸಂಬಂಧಗಳನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಪ್ರಸ್ತುತ, ಮಾಯಾ ಅವರು 2011ರಲ್ಲಿ ರತನ್ ಟಾಟಾ ಅವರಿಂದ ಉದ್ಘಾಟನೆಗೊಂಡ ಕೋಲ್ಕತ್ತಾ ಮೂಲದ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ವಹಿಸುವ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್ನ ಆರು ಸದಸ್ಯರಲ್ಲಿ ಒಬ್ಬರಾಗಿದ್ದಾರೆ.