ಬೆಂಗಳೂರು: ನಾನು ಸಂವಿಧಾನದ ಭಕ್ತ, ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ. ಕಾರಣ ನಾನು ರಾಮ ಮಂದಿರಕ್ಕೆ ಹೋಗುವುದಿಲ್ಲ. ಯಾರಾದರೂ ಕರೆದರೆ ರಾಮ ಮಂದಿರದ ವಾಸ್ತುಶಿಲ್ಪ, ಕಲೆ ನೋಡಲು ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿಯವರು 3 ಕೋಟಿ ಜನರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಕುರಿತ ಪ್ರಶ್ನೆಗೆ ವಿಕಾಸಸೌಧದಲ್ಲಿ ಉತ್ತರಿಸಿದ ಅವರು, ಬಿಜೆಪಿಯವರು ಜನರನ್ನು ಅಯೋಧ್ಯೆಗೆ ಕರೆದುಕೊಂಡು ಹೋದಲ್ಲಿ ತಪ್ಪೇನಿದೆ?
ಬಿಜೆಪಿ ರಾಮನ ವಿಚಾರದಲ್ಲಿ ರಾಜಕೀಯ ಇಲ್ಲವೆಂದು ಜನರನ್ನು ಕರೆದುಕೊಂಡು ಹೋದರೆ ಏನೆನ್ನಬೇಕು? ಎಂದು ವ್ಯಂಗ್ಯವಾಡಿದರು.
ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ. ಹೀಗಾಗಿ ರಾಮನನ್ನು ನೋಡಲು ಹೋಗುವುದಿಲ್ಲ ಎಂದರು. ಕಾಂಗ್ರೆಸ್ ರಾಮ ಮಂದಿರ ವಿರೋಧ ಮಾಡಿಲ್ಲ. ಶಂಕರಾಚಾರ್ಯರು ವಿರೋಧ ಮಾಡಿದ್ದು. ರಾಮನಿಗೆ ಸಾಧು ಸಂತರು ಜೀವ ತುಂಬಬೇಕು ಎಂದು ಅವರು ಹೇಳಿದ್ದರು. ಅಪೂರ್ಣ ಮಂದಿರ ಉದ್ಘಾಟನೆ ಬೇಡ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಅದಕ್ಕೆ ಕಾಂಗ್ರೆಸ್ ನವರು ಏಕೆ ಉತ್ತರ ಕೊಡಬೇಕು? ಅಧಿಕಾರದಲ್ಲಿರುವವರು ಅವರಲ್ಲವೇ ಉತ್ತರ ಕೊಡಬೇಕಾದವರು ಎಂದು ಟಾಂಗ್ ಕೊಟ್ಟರು.
ಪ್ರಧಾನಿಗಳು ಸುಪ್ರೀಂಕೋರ್ಟ್ ಆದೇಶದ ಮೇಲೆ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶಕ್ಕೆ ನಾವು ವಿರೋಧ ಮಾಡಿಲ್ಲ. ನಮ್ಮ ಕಾರ್ಯಕರ್ತರಿಗೆ ಅವರವರ ಇಚ್ಛೆಯಂತೆ ಮಾಡಿ ಎಂದು ಹೈಕಮಾಂಡ್ ಹೇಳಿದೆ ಎಂದು ಸ್ಪಷ್ಟನೆ ನೀಡಿದರು.
ನಾನು ಬುದ್ಧ ಬಸವ ತತ್ವ ಪಾಲನೆ ಮಾಡುತ್ತೇನೆ. ಎಷ್ಟು ಜನರಿಗೆ ರಾಮಾಯಣ, ಋಗ್ವೇದ, ಹನುಮಂತ ಜಪ ಬರುತ್ತೆ ಹೇಳಲಿ ನೋಡೋಣ ಎಂದು ಬಿಜೆಪಿಯವರಿಗೆ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.