ಚಾಮರಾಜನಗರ : ‘ರಾಮನ ಮೇಲೆ ನಮಗೂ ಭಕ್ತಿ ಗೌರವವಿದೆ. ಹಾಗೆಂದು ಚುನಾವಣೆಗೆ ರಾಮ ಮಂದಿರವನ್ನು ಬಳಸಿಕೊಳ್ಳಬಾರದು’ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಶುಕ್ರವಾರ ಹೇಳಿದರು.
ರಾಮಮಂದಿರ ಉದ್ಘಾಟನೆ ವಿಚಾರವಾಗಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ರಾಮನ ಮೇಲಿನ ಭಕ್ತಿಯನ್ನು ಗುಡಿ ಕಟ್ಟಿ ತೋರಿಸಬೇಕು ಎಂಬುದೇನಿಲ್ಲ. ರಾಮನ ಆದರ್ಶಗಳು ನಮಗೆ ಮುಖ್ಯ. ರಾಮಮಂದಿರ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಅಪೂರ್ಣ ಮಂದಿರವನ್ನು ಉದ್ಘಾಟನೆ ಮಾಡಬಾರದು ಎಂದು ಶಂಕರಾಚಾರ್ಯ ಪೀಠಗಳ ಪೂಜ್ಯರೂ ಹೇಳಿದ್ದಾರೆ. ಆದರೆ ಚುನಾವಣೆಯ ವಿಷಯವಾಗಿ ರಾಮಮಂದಿರ ಬಳಸಿಕೊಳ್ಳಲಾಗುತ್ತಿದೆ’ ಎಂದರು.
ಬಾಬರಿ ಮಸೀದಿ ಮಾದರಿಯಲ್ಲಿ ಭಟ್ಕಳದ ಮಸೀದಿಯನ್ನು ಒಡೆಯುತ್ತೇವೆ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಸಂಸ್ಕಾರ ಇರುವವರು ಹೇಳುವಂತಹ ಮಾತಲ್ಲ ಇದು. ನಾವು ಜಾತ್ಯತೀತವಾಗಿರಬೇಕು. ಒಂದು ಸಮುದಾಯ, ಧರ್ಮವನ್ನು ಗುರಿಮಾಡುವುದು ತಪ್ಪು’ ಎಂದರು.