ಯಾದಗಿರಿ: ಈ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಕರ್ನಾಟಕದಲ್ಲಿ ಹಿಂದೂಗಳ ಮುಕ್ತವಾಗಿ ಬದುಕಬೇಕೋ? ಬೇಡವೋ? ಎಂಬ ಆತಂಕ ಉಂಟಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮಂಗಳವಾರ ಸಂಜೆ ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಿನಂತೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಪೊಲೀಸರು ಹಾಗೂ ಎಸ್ಪಿಯವರ ಮೇಲೆಯೇ ಕಲ್ಲು ತೂರಾಟ ನಡೆಯುತ್ತದೆ ಎಂದು ಅದೆಷ್ಟು ಧೈರ್ಯ ಇರಬೇಕು ಎಂದು ಘರ್ಷಣೆಯ ಘಟನೆಗ ಬಗ್ಗೆ ಆತಂಕ ವ್ಯಕ್ತಪಡಿಸಿದ ಯತ್ನಾಳ್, ಪೊಲೀಸರಿಗೆ ಮುಕ್ತವಾಗಿ ಅಧಿಕಾರ ಕೊಡುತ್ತಿಲ್ಲ, ಅವರ ಕೈಯಲ್ಲಿನ ಶಸ್ತ್ರಾಸ್ತ್ರ ಉಪಯೋಗ ಮಾಡದಂತೆ ಸರ್ಕಾರ ಅಸಹಾಯಕತೆ ಮಾಡಿದೆ, ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡೋರು ಯಾರು ಎಂದು ಪ್ರಶ್ನಿಸಿದರು.
ಹಿಂದೂ ಧರ್ಮ ನಾಶ ಮಾಡುತ್ತೀನಿ ಅಂತಾರೆ, ಚಾಕು-ಚೂರಿ ತೆಗೆದುಕೊಂಡು ಬಯಲಿಗೆ ಬರುತ್ತಾರೆ, ಕೋಲಾರದಲ್ಲಿ ಖಡ್ಗ ಪ್ರದರ್ಶನ ಮಾಡಿದ್ದಾರೆ ಎಂದ ಯತ್ನಾಳ್, ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಹುಬ್ಬಳ್ಳಿ ಪೋಲಿಸ್ ಠಾಣೆ ಸುಟ್ಟವರ ಮೇಲಿನ ಪ್ರಕರಣಗಳ ವಾಪಸ್ ಗೆ ಸರ್ಕಾರ ಆದೇಶ ಮಾಡಿದೆ. ಸರ್ಕಾರ ಒಂದು ಕೋಮಿಗೆ ಬೆಂಬಲ ಕೊಡುತ್ತಿರುವುದರಿಂದ ಹಿಂದೂಗಳ ರಕ್ಷಣೆ ಪ್ರಶ್ನೆಯಾಗಿದೆ, ಇದೇ ರೀತಿ ಆಡಳಿತ ನಡೆದರೆ ಹಿಂದೂಗಳೇ ರಕ್ಷಣೆಗೆ ಹೊರ ಬರಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪರಿಸ್ಥಿತಿ ನಿಯಂತ್ರಣದ ನಂತರ ಶಿವಮೊಗ್ಗಕ್ಕೆ ಭೇಟಿ ಕೊಡುವುದಾಗಿ ಯತ್ನಾಳ್ ಹೇಳಿದರು.