ರಾಯಚೂರು: ಸನಾತನ ಧರ್ಮದ ಬಗ್ಗೆ ಮಾತಾಡಿದವರಿಗೆ ಕುಷ್ಠರೋಗ ಮತ್ತು ಏಡ್ಸ್ ಹತ್ತಿದೆ. ಯಾರೋ ಒಬ್ಬ ಸಚಿವ ಸನಾತನ ಧರ್ಮದ ಹುಟ್ಟು ಎಲ್ಲಿ ಅಂತಾನೆ. ಆ ಮಂತ್ರಿ ಯಾರಿಗೆ ಹುಟ್ಟಿದ್ದಾರೆ ಅವರಿಗೆ ಗೊತ್ತಿಲ್ಲ. ಇಂಥವರೆಲ್ಲಾ ನಮ್ಮ ಸನಾತನ ಧರ್ಮದ ಬಗ್ಗೆ ಏನು ಪ್ರಶ್ನೆ ಮಾಡ್ತಾರೆ ಎಂದು ಪರೋಕ್ಷವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಟೀಲ್ ಯತ್ನಾಳ್ ವಾಗ್ದಾಳಿ ಮಾಡಿದರು.
ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಧಮ್ಮು, ತಾಕತ್ತು ಇದ್ದರೇ ಇಸ್ಲಾಂ, ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಶ್ನಿಸಿ. ಈಗ ಮಾತಡುವವರೆಲ್ಲ ಸನಾತನ ಧರ್ಮದಲ್ಲಿ ಜನಿಸಿದ್ದಾರೆ. ಮೊಘಲರು, ಔರಂಗಜೇಬ್ ಸೇರಿ ಅನೇಕರು ದಾಳಿ ಮಾಡಿದ್ದಾರೆ. ಅವರಿಂದಲೇ ನಮ್ಮ ಭಾರತವನ್ನು ಇಸ್ಲಾಮೀಕರಣ ಮಾಡಲು ಆಗಲಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ನಾಶದ ಸ್ಥಿತಿಯಲ್ಲಿದೆ, ಮೊದಲಿನ ರೀತಿ ಇಲ್ಲ. ಇವೆಲ್ಲಾ ಕೆಟ್ಟ ಹುಳುಗಳು ಹೊರಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸನಾತನ ಧರ್ಮಕ್ಕೆ ಯಾರೂ ಸ್ಥಾಪಕರಿಲ್ಲ. ಇದಕ್ಕೆ ಅಂತ್ಯ ಇಲ್ಲ. ಇದು ಶಾಶ್ವತ, ಇದು ಅನಂತ. ಇದು ನಮ ದೇಶದ ಸಂಸ್ಕೃತಿ. ಐದು ಸಾವಿರ ವರ್ಷಗಳ ಹಿಂದೆ ರಾಯಾಯಣ ಆಗಿದೆ. ಮೂರುವರೆ ಸಾವಿರ ವರ್ಷಗಳ ಹಿಂದೆ ಮಹಾಭಾರತ ಆಗಿದೆ. ಅದರ ಹಿಂದೆಯೂ ಸನಾತನ ಧರ್ಮ ಇದೆ. ಮೂಲ ಹುಡುಕಲು ಸಾಧ್ಯವಿಲ್ಲ. ಇದು ದೇವರ ಸೃಷ್ಟಿ ಎಂದು ತಿಳಿಸಿದರು.
ಸಮಾನತೆ ಇಲ್ಲ ಅಂತಾರೆ, ಹಾಗಾದರೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಿಸರ್ವೇಶನ್ ಮೇಲೆಯೇ ದೇಶದ ಕಾನೂನು ಮಂತ್ರಿಗಳಾದ್ರಾ? ಅರ್ಹತೆ ಯೋಗ್ಯತೆ ಮೇಲೆ ಆದರು. ವಾಲ್ಮೀಕಿ ಅವರು ರಾಮಾಯಣ ಬರೆದರು. ಅವಾಗ ಎಲ್ಲಿ ಜಾತಿ ಪದ್ದತಿ ಇತ್ತು. ವೇದವ್ಯಾಸರು ಮಹಾಭಾರತ ಬರೆದರು. ನಮ್ಮ ದೇಶದ ಸಂವಿಧಾನದ ಉಳಿಯಲು, ಸನಾತನ ಧರ್ಮ ಬೇಕೇ ಬೇಕು ಅದು ಉಳಿಯಬೇಕು. ಇಲ್ಲದಿದ್ದರೇ ಭಾರತ ಇಸ್ಲಾಮೀಕರಣ ಆದರೆ, ಜಿಹಾದಿ ಆಗತ್ತೆ ಎಂದು ಕಳವಳ ವ್ಯಕ್ತಪಡಿಸಿದರು.