ವಿಜಯನಗರ : ಬುದ್ಧಿ ಇರುವವರನ್ನು ಶೃಂಗಸಭೆಗೆ ಕರೆಯುತ್ತಾರೆ. ಬುದ್ಧಿಯೇ ಇಲ್ಲದವರನ್ನು ಶೃಂಗಸಭೆಗೆ ಹೇಗೆ ಕರೆಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ತಮಗೆ ಆಹ್ವಾನವಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ಪ್ರತಿಕ್ರಿಯಿಸಿ, ಅಂಥವರನ್ನು ಸಭೆಗೆ ಕರೆದು ಏನಾದರೂ ಮಾತನಾಡಿದರೆ ಏನು ಮಾಡುವುದು. ಬುದ್ಧಿ ಇಲ್ಲದವರನ್ನು ಕರೆದು ವಿಶ್ವದ ಮುಂದೆ ಮತ್ತೆ ಅಪಮಾನಕ್ಕೆ ಒಳಗಾಗಬೇಕಾ ಎಂದು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಇಂಡಿಯಾ ವಿವಾದ ವಿಚಾರವಾಗಿ ಮಾತನಾಡಿ, ಭಾರತ ನಮ್ಮ ದೇಶದ ಹೆಸರು. ಇಂಡಿಯಾ ನಮ್ಮ ಹೆಸರಲ್ಲ. ಇಂಡಿಯಾ ಎಂಬ ಪದ ಬ್ರಿಟೀಷರಿಂದ ಬಂದಿದೆ. ಅವರಿಗೆ ಹೆಸರು ಉಚ್ಛರಿಸಲಾಗದೇ ಹೆಸರು ಅಪಭ್ರಂಶವಾಗಿದೆ. ನಮ್ಮದು ಭಾರತ ದೇಶ, ಭಾರತವಾಗೇ ಇರುತ್ತದೆ ಎಂದು ಹೇಳಿದರು.