ದಕ್ಷಿಣ ಕನ್ನಡ: ನಂಬರ್ ಪ್ಲೇಟ್ ಇರುವ ಮತ್ತು ಇಲ್ಲದ ಮೋಟಾರ್ ಸೈಕಲ್ ಕದ್ದ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಸೊತ್ತು ಸಹಿತ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಬೆಳಗಿನ ಜಾವ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ನಲ್ಲಿ ಆರೋಪಿಗಳಾದ ಮೂಡುಬಿದಿರೆ ಪ್ರಾಂತ್ಯ ಗ್ರಾಮದ ಕೋಟೆಬಾಗಿಲು ನಿವಾಸಿಗಳಾದ ಸಯ್ಯದ್ ಆರೀಫ್ ಆಲಿ ಅವರ ಪುತ್ರ ಸಯ್ಯದ್ ಝಾಕೀರ್ (20) ಮತ್ತು ಅದೇ ಪ್ರದೇಶದಲ್ಲಿರುವ ದರ್ಗಾ ರೋಡ್ ಬಳಿಯ ನಿವಾಸಿ ಮುಬೀನ್ ಅವರ ಪುತ್ರ ಮೊಹಮ್ಮದ್ ಶಾಹೀನ್ನನ್ನು ಅವರ ವಶ ಇದ್ದ ನಂಬರ್ ಪ್ಲೇಟ್ ಇಲ್ಲದ ಒಂದು ರೋಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಮೋಟಾರ್ ಸೈಕಲ್ ಸಹಿತ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಲಾಯಿತು.
ಆಗ ಆರೋಪಿಗಳು ಕಳೆದ ಅಕ್ಟೋಬರ್ 24ರ ಮಧ್ಯರಾತ್ರಿ ಮೂಡುಬಿದಿರೆ ಜೈನಪೇಟೆಯ ಬಡಗ ಬಸದಿ ಎದುರು ಇರು ದೇವಿಕೃಪಾ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡರು.
ವಿಚಾರಣೆ ವೇಳೆ ಇದೇ ಆರೋಪಿಗಳು ಮಾರ್ಪಾಡಿ ಗ್ರಾಮದಲ್ಲಿರುವ ಎವರ್ಪ್ರೈಸ್ ರೆಸಿಡೆನ್ಸ್ ಅಪಾರ್ಟ್ಮೆಂಟನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಕೆಎ 19 ಇಯು 0009ನೇ ರೋಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಮೋಟಾರ್ ಸೈಕಲನ್ನೂ ಕಳವು ಮಾಡಿ ಪೇಪರ್ ಮಿಲ್ ಬಳಿ ಇರುವ ಕೀರ್ತಿನಗರ ಕ್ರಾಸ್ಬಳಿ ಪೊದೆಗಳ ಮಧ್ಯೆ ಬಚ್ಚಿಟ್ಟಿರುವುದನ್ನು ತಿಳಿಸಿದ್ದಾರೆ. ಅದರಂತೆ ಪೊಲೀಸರು ಅಲ್ಲಿಗೆ ತೆರಳಿ ಆ ಬೈಕನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಎರಡೂ ಬೈಕುಗಳ ಮೌಲ್ಯ ರೂ. 3 ಲಕ್ಷ ಆಗಿರಬಹುದೆಂದು ಆಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ನುಪಮ್ ಅಗರ್ವಾಲ್ ಅವರ ಮಾರ್ಗದರ್ಶನ. ಡಿಸಿಪಿಯವರಾದ ಸಿದಾರ್ಥ ಗೊಯಲ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ
ಮನೋಜ್ ಕುಮಾರ್ ನಾಯಕ್ ಅವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಹಾಗೂ ಠಾಣಾ ಅಪರಾಧ ವಿಭಾಗದ ಸಿಬಂದಿಯವರಾದ ಮೊಹಮ್ಮದ್ ಇಟ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಮತ್ತು ಚಂದ್ರಹಾಸ ರೈ ಪಾಲ್ಗೊಂಡಿದ್ದರು.