ಶಿವಮೊಗ್ಗ : ಬರ ಬಂದಾಗ ಮೊದಲು ಹೊಡೆತ ಬೀಳುವುದು ವಿದ್ಯುತ್ ಮೇಲೆ, ಯಾವುದೇ ಜಲಾಶಯಗಳು ತುಂಬಿಲ್ಲ, ರಾಯಚೂರು ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ಇಲ್ಲ, ಹೀಗಾಗಿ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡುತ್ತಿದೆ ಎಂದು ಅರಗ ಜ್ಞಾನೇಂದ್ರ ಹೇಳಿದರು. ಮಳೆಯಿಲ್ಲದೆ ರೈತರ ಬೆಳೆಗಳಿಗೆ ನೀರಿಲ್ಲದಂತಾಗಿದೆ. ಮೋಟರ್ ಬಳಸಿ ನೀರು ಹರಿಸೋಣ ಎಂದರೆ ವಿದ್ಯುತ್ ಇಲ್ಲದಂತಾಗಿದೆ, ಕಲ್ಲಿದ್ದಲು ಕಂಪನಿಗೆ ಒಂದು ಸಾವಿರ ಕೋಟಿ ರೂಪಾಯಿ ಬಾಕಿ ನೀಡಬೇಕಿದೆ. ಕೆಪಿಸಿಎಲ್ಗೆ ಎಸ್ಕಾಂಗಳು ೨ ಸಾವಿರ ಕೋಟಿ ರೂಪಾಯಿ ಬಾಕಿ ನೀಡಬೇಕಿದೆ. ಹೀಗಾಗಿ ಸರ್ಕಾರ ವಿದ್ಯುತ್ ದರ ಜಾಸ್ತಿ ಮಾಡಿದೆ. ಅದನ್ನು ಬಿಟ್ಟು ಜನರಿಗೆ ಅನುಕೂಲ ಒದಗಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಸಮಸ್ಯೆ ತಮ್ಮದಲ್ಲ ಎಂದು ಸರ್ಕಾರ ಸುಮ್ಮನೆ ಕುಳಿತಿದೆ ಎಂದು ಹೇಳಿದರು. ಅಡಕೆ ಬೆಳೆ ಧಾರಣೆ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ನಡೆಯುತ್ತಿದೆ. ಪೇಪರ್ ಹುಲಿಗಳು ಈ ಬಗ್ಗೆ ಅಪಪ್ರಚಾರ ನಡೆಸುತ್ತಿವೆ. ಈಗ ಹೇಳಿಕೆ ನೀಡುತ್ತಿರುವವರ ಸರ್ಕಾರ ಕೇಂದ್ರದಲ್ಲಿದ್ದಾಗ ಅಡಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ವರದಿ ನೀಡಿದ್ದರು. ಇದೀಗ ಅಡಕೆ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸುತ್ತಲಿನ ರಾಷ್ಟ್ರಗಳೊಂದಿಗೆ ಸೌಹಾರ್ಧ ಸಂಬಂಧ ಹೊಂದಿದ್ದೇವೆ,
ಕೆಲವು ಒಪ್ಪಂದ ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಬೂತಾನ್ನಿಂದ 17 ಸಾವಿರ ಟನ್ ಅಡಕೆ ತರಿಸಿಕೊಳ್ಳಲಾಗುತ್ತಿದೆ. ಈ ಅಡಕೆ ಬರುವುದರೊಳಗೆ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ನಮ್ಮ ಅಡಕೆ ಧಾರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಯಾವ ಶಾಸಕರು ಕಾಂಗ್ರೆಸ್ಗೆ ಹೋಗಲ್ಲ, ಕಾಂಗ್ರೆಸ್ನವರು ಸುಮ್ಮನೆ ಗುಲ್ಲು ಎಬ್ಬಿಸುತ್ತಿದ್ದಾರೆ, ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ, ಈ ವಿಷಯವನ್ನು ಮರೆಮಾಚಲು ಇದನ್ನು ಬೆಳಕಿಗೆ ತಂದಿದ್ದಾರೆ, ನನಗೆ ಇರುವ ಮಾಹಿತಿ ಪ್ರಕಾರ ಯಾವ ಶಾಸಕರು ಕಾಂಗ್ರೆಸ್ಗೆ ಹೋಗಲ್ಲ ಎಂದು ಹೇಳಿದರು.