ಶಿವಮೊಗ್ಗ: ಹಳೆಯ ದ್ವೇಷದ ಹಿನ್ನಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರೋ ಘಟನೆ ಶಿವಮೊಗ್ಗದ ಆಲ್ಕೊಳ ಸರ್ಕಲ್ ನಲ್ಲಿ ನಡೆದಿದೆ. ಈ ಘಟನೆಯ ವೇಳೆಯಲ್ಲಿ ಐವರಿಗೆ ಚಾಕುವಿನಿಂದ ಇರಿಯಲಾಗಿದೆ.
ಶಿವಮೊಗ್ಗದ ಆಲ್ಕೊಳ ಸರ್ಕಲ್ ಸಮೀಪದ ಎಲ್ಐಸಿ ಕಚೇರಿಯ ಬಳಿಯಲ್ಲಿ ನಿನ್ನೆ ಮಧ್ಯರಾತ್ರಿ ಎರಡು ಗುಂಪುಗಳ ನಡುವೆ ಹಳೇ ದ್ವೇಷಕ್ಕೆ ಗಲಾಟೆಯಾಗಿದೆ. ಈ ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿದಾಗ ಚಾಕು ಇರಿತದಂತ ಘಟನೆ ಕೂಡ ನಡೆದಿದೆ. ಪವನ್ ಹಾಗೂ ಕಿರಣ್ ಎಂಬ ಸ್ನೇಹಿತರ ಮಧ್ಯತ ಜಗಳ, ನಿನ್ನೆ ಮಧ್ಯರಾತ್ರಿ ಸ್ಪೋಟಗೊಂಡಿದೆ. ಇದೇ ವಿಚಾರವಾಗಿ ನೇತಾಜಿ ಸರ್ಕಲ್ ನಲ್ಲಿ ಗಲಾಟೆಯಾಗಿ, ಅಲ್ಲಿಂದ ಆಲ್ಕೊಳ ಸರ್ಕಲ್ ಗೆ ಶಿಫ್ಟ್ ಆಗಿದೆ. ಕಿರಣ್ ಮತ್ತು ಆತನ ಸ್ನೇಹಿತರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಚಾಕು ಇರಿತಕ್ಕೆ ಒಳಗಾದಂತ ಐವರು ಯುವಕರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.