ಧಾರವಾಡ: ದೀಪಾವಳಿ ಹಬ್ಬದ ಸಂದರ್ಭದಲ್ಲೇ ಧಾರವಾಡ ಪೊಲೀಸರು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದು, ಬಿಜೆಪಿ ಮುಖಂಡ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದಾರೆ.
ಬಿಜೆಪಿ ಮುಖಂಡ ಚನ್ನವೀರಗೌಡ ಪಾಟೀಲ್, ನಾಗಪ್ಪ ಸೋಗಿ, ವಿನಾಯಕ ಪಾಟೀಲ್, ಗಣೇಶ್ ಶಲವಾಡೆ, ಮಲ್ಲಪ್ಪ ಖಾನನ್ನವರ್, ಮಡಿವಾಳಪ್ಪ ಐಗಾರ, ಚನ್ನಪ್ಪಗೌಡ ಪಾಟೀಲ್, ಶ್ರೀಶೈಲ್ ಪಾಟೀಲ್ ಬಂಧಿತರು ಎಂದು ತಿಳಿದುಬಂದಿದೆ. ಧಾರವಾಡದ ನರೇಂದ್ರ ಶಾಲೆ ಬಳಿ ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸನಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಜೂಜುಕೋರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಬಸನಗೌಡ ಕುತ್ತಿಗೆಗೆ ಹಾಗೂ ಕಾನ್ಸ್ ಟೇಬಲ್ ನಾಗರಾಜ್ ತಲೆಗೆ ಗಾಯಗಳಾಗಿವೆ. ಹಲ್ಲೆ ನಡೆಸಿ ಹತ್ತು ಜನರು ಎಸ್ಕೇಪ್ ಆಗಿದ್ದು, 8 ಜನರನ್ನು ಬಂಧಿಸಲಾಗಿದೆ.
ಕಳೆದ ಮೂರು ದಿನಗಳಲ್ಲಿ 27 ಜೂಜಾಟದ ಪ್ರಕರಣಗಳಲ್ಲಿ 236 ಜನರನ್ನು ಬಂಧಿಸಲಾಗಿದ್ದು, 3.38 ಲಕ್ಷ ವಶಕ್ಕೆ ಪಡೆಯಲಾಗಿದೆ ಧಾರವಾಡ ಎಸ್ ಪಿ ಗೋಪಾಲ್ ಬ್ಯಾಕೋಡ್ ಮಾಹಿತಿ ನೀಡಿದ್ದಾರೆ.