ಹುಬ್ಬಳ್ಳಿ: ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ನ ಮನೆಯೊಂದರಲ್ಲಿ ತಡರಾತ್ರಿ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ದರೋಡೆಕೋರರು ದುಷ್ಕೃತ್ಯ ಎಸಗಿದ್ದಾರೆ. ಅಂದಾಜು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ.
ವಿದ್ಯಾಮಂದಿರ ಬುಕ್ ಡಿಪೋ ಮಾಲೀಕ ಉಲ್ಲಾಸ ದೊಡ್ಡಮನಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆ ಕಿಟಕಿಯ ಕಬ್ಬಿಣದ ಗ್ರಿಲ್ ತುಂಡರಿಸಿ ಮನೆಯೊಳಗೆ ನುಗ್ಗಿದ ದರೋಡೆಕೋರರು, ಮನೆಯಲ್ಲಿದ್ದವರ ಕೈ, ಕಾಲು ಕಟ್ಟಿ ಹಾಕಿ ನಗ, ನಾಣ್ಯ ದೋಚಿ ಪರಾರಿಯಾಗಿದ್ದಾರೆ.
ಸುಮಾರು 8 ಜನರಿದ್ದ ಡಕಾಯಿತರ ತಂಡ ಕೃತ್ಯ ಎಸಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಗೋಕುಲ ರೋಡ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಲಾಗಿದ್ದು, ಹೆಚ್ಚಿನ ಪೊಲೀಸರನ್ನು ಅಲ್ಲಿ ನಿಯೋಜಿಸಲಾಗಿದೆ. ಇದರಿಂದಾಗಿ ಗಸ್ತು ತಿರುಗಲು ಪೊಲೀಸರ ಕೊರತೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಡಕಾಯಿತ ತಂಡ ಮನೆ ದರೋಡೆ ಮಾಡಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.