ಬೀದರ : ತೀವ್ರ ಜಿದ್ದಾ ಜಿದ್ದಿನ ಕಣವಾಗಿದ್ದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ಆಡಳಿತ ಚುಕ್ಕಾಣಿ ಖಂಡ್ರೆ ಕುಟುಂಬದ ತೆಕ್ಕೆಗೆ ಒಲಿದಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಬಣಕ್ಕೆ ಗೆಲುವಾಗಿದ್ದು, ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಉಮಾಕಾಂತ್ ನಾಗಮಾರಪಳ್ಳಿ ಬಣಕ್ಕೆ ಸೋಲಾಗಿದೆ.
ಒಟ್ಟು 15 ಡಿಸಿಸಿ ಬ್ಯಾಂಕ್ ನಿರ್ದೇಶಕರಲ್ಲಿ 13 ಜನರ ಫಲಿತಾಂಶ ಹೊರಬಿದ್ದಿದ್ದು, 13 ರಲ್ಲಿ ಈಶ್ವರ್ ಖಂಡ್ರೆ ಬಣಕ್ಕೆ 8 ನಿರ್ದೇಶಕರ ಸ್ಥಾನಗಳು ಒಲಿದಿವೆ. ಉಮಾಕಾಂತ್ ನಾಗಮಾರಪಳ್ಳಿ ಬಣ 5 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ. ಉಳಿದ ‘ಸಿ’ ಕ್ಯಾಟಗರಿಯ ಎರಡು ನಿರ್ದೇಶಕರ ಸ್ಥಾನಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗ ಪಡಿಸಿಲ್ಲ. ಕೋರ್ಟ್ನಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ಎರಡು ಉಳಿದ ಸ್ಥಾನಗಳ ಫಲಿತಾಂಶಕ್ಕೆ ತಡೆ ನೀಡಲಾಗಿದೆ.
ಖಂಡ್ರೆ ಹಾಗೂ ನಾಗಮಾರಪಳ್ಳಿ ಕುಟುಂಬದ ನಡುವೆ ಡಿಸಿಸಿ ಬ್ಯಾಂಕ್ ಚುನಾವಣೆಯು ಭಾರೀ ಪ್ರತಿಷ್ಠೆಯ ಕಣವಾಗಿತ್ತು.
ಗೆಲುವಿನ ಫಲಿತಾಂಶ ಹೊರಬೀಳುತ್ತಿದ್ದಂತೆಯೇ, ಸಚಿವ ಈಶ್ವರ್ ಖಂಡ್ರೆ ಬಣದಿಂದ ಸಂಭ್ರಮಾಚರಣೆ ಮಾಡಲಾಯಿತು. ಸಚಿವ ಖಂಡ್ರೆಯವರನ್ನು ಹೆಗಲ ಮೇಲೆ ಹೊತ್ತು ಗೆಲುವನ್ನು ಸಂಭ್ರಮಿಸಿದ್ದಾರೆ.