ಮಂಗಳೂರು : ಎರಡು ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ತೌಸಿಫ್ ಅಹಮದ್ (34) ಹಾಗೂ ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಫರಾಜ್ (27) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
‘ಅಡೂರು ಗ್ರಾಮದ ಪುಣಿಕೋಡಿಯ ಸದಾಶಿವ ಪೂಜಾರಿ ಎಂ. ಹಾಗೂ ಬಡಗ ಉಳಿಪಾಡಿ ಗ್ರಾಮದ ಮನಲಪದವಿನ ಸದಾಶಿವ ಸಾವಂತ ಅವರ ಮನೆಯ ಬೀಗವನ್ನು ಮುರಿದು ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಮನೆಗಳಿಂದ ಕಳವಾದ ಒಟ್ಟು ₹ 4 ಲಕ್ಷ ಮೌಲ್ಯದ ಒಟ್ಟು 75 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಪಣಂಬೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ನಗರ ಮತ್ತು ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣಗಳಲ್ಲೂ ತೌಸಿಫ್ ಅಹಮದ್ ಮತ್ತು ಮೊಹಮ್ಮದ್ ಫರಾಜ್ ಆರೋಪಿಗಳಾಗಿದ್ದರು’ ಎಂದರು.
‘ಬಜಪೆ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್, ಪಿಎಸ್ಐಗಳಾದ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಕುಮಾರೇಶನ್, ಲತಾ, ಎಎಸ್ಐ ರಾಮ ಪೂಜಾರಿ ಮೇರೆಮಜಲು, ಸಿಬ್ಬಂದಿ ರಶೀದ್ ಶೇಖ್, ಸುಜನ್, ದುರ್ಗಾ ಪ್ರಸಾದ ಶೆಟ್ಟಿ, ಮಂಜುನಾಥ, ಬಸವರಾಜ್ ಪಾಟೀಲ್, ಜಗದೀಶ್, ದಯಾನಂದ, ಮಧು, ಅನಿಲ್, ಕೆಂಚಪ್ಪ ಮತ್ತು ನಗರ ಬೆರಳಚ್ಚು ಘಟಕದ ಪಿಎಸ್ಐ ಎಂ.ಸಿ. ಬಡೀಗೇರ ಹಾಗೂ ಸಿಬ್ಬಂದಿ ವಿ.ಪಿ.ಮಣ್ಣಿಕೇರಿ ಪ್ರಕರಣ ಬೇಧಿಸುವಲ್ಲಿ ಸಹಕರಿಸಿದ್ದಾರೆ’ ಎಂದರು.