ಬೆಂಗಳೂರು : 17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕ ಮತ್ತು 24 ವರ್ಷದ ಶಿಕ್ಷಕಿ ನಡುವೆ ಬೆಳೆದುಕೊಂಡಿದ್ದ ಕ್ರಷ್ ಇದೀಗ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗರಭಾವಿ ರಸ್ತೆಯ ಬೈರವೇಶ್ವರ ನಗರದಲ್ಲಿ ಹಲ್ಲೆಗೊಳಗಾದ ಬಾಲಕನ ಕುಟುಂಬ ವಾಸವಾಗಿದ್ದು, ಖಾಸಗಿ ಕಾಲೇಜಿನಲ್ಲಿ ಬಾಲಕ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಇದೇ ಏರಿಯಾದ ಖಾಸಗಿ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯೊಂದಿಗೆ ಸಲುಗೆ ಬೆಳೆದು ಈತನಿಗೆ ಕ್ರಶ್ ಆಗಿತ್ತು. ಕಾಲ ಕ್ರಮೇಣ ಇಬ್ಬರು ಓಡಾಡಿಕೊಂಡಿದ್ದರು. ಆಗಾಗ ಕರೆ ಮಾಡಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ಬಗ್ಗೆ ಬಾಲಕನ ತಂದೆಗೆ ವಿಷಯ ಗೊತ್ತಾಗಿ ಇಬ್ಬರಿಗೂ ಬೈದು ಬುದ್ಧಿವಾದ ಹೇಳಿದ್ದರು. ಕೆಲ ದಿನಗಳ ಬಳಿಕ ಮತ್ತೆ ಫೋನ್ ಸಂಭಾಷಣೆ ಮುಂದುವರಿಸಿದ್ದರು. ಕಳೆದ ಅಕ್ಟೋಬರ್ 1ರಂದು ಈ ಬಾಲಕನ ಹುಟ್ಟುಹಬ್ಬ ಹಿನ್ನೆಲೆ ಬಸವೇಶ್ವರ ನಗರದ ಬೇಕರಿಯೊಂದರಲ್ಲಿ ಇಬ್ಬರು ಭೇಟಿಯಾಗಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಣೆ ಮಾಡಲಾಗಿತ್ತು. ನಂತರ ಸಮೀಪದ ಪಾರ್ಕ್ ನಲ್ಲಿ ಕುಳಿತು ಮಾತನಾಡುತ್ತಿದ್ದರು. ಇದೇ ವೇಳೆ ಶಿಕ್ಷಕಿಗೆ ಮದುವೆಯಾಗುವ ಹುಡುಗನಿಗೆ ವಿಷ್ಯ ಗೊತ್ತಾಗಿದೆ. ಆಗ ಆತ ತಾನು ಮದುವೆ ಆಗಬೇಕಿದ್ದ ಶಿಕ್ಷಕಿಯ ಸಹೋದರನಿಗೆ ಕರೆ ಮಾಡಿ ಕರೆಯಿಸಿಕೊಂಡಿದ್ದ. ಈ ವೇಳೆ ಆರೋಪಿ ಶಶಾಂಕ್ ಎಂಬಾತ ಬಾಲಕನ ಮೇಲೆ ಹಲ್ಲೆ ಮಾಡಿ ನಮ್ಮ ಅಕ್ಕನ ಸಹವಾಸಕ್ಕೆ ಬರಬೇಡ ಎಂದು ತಾಕೀತು ಮಾಡಿದ್ದ. ತೀವ್ರ ಹಲ್ಲೆಯಿಂದ ಗಾಯಗೊಂಡಿದ್ದ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮುಂದೆ ಹೀಗಾಗದಂತೆ ವಾರ್ನ್ ಮಾಡಿದ್ದ. ಬಾಲಕ ಗಾಯಗೊಂಡಿರುವುದನ್ನು ಕಂಡು ಪ್ರಶ್ನಿಸಿದ ಆತನ ತಂದೆ, ಬೈಕ್ ನಲ್ಲಿ ಹೋಗುವಾಗ ಕಾರಿನ ಗ್ಲಾಸ್ ತಗುಲಿ ಪೆಟ್ಟಾಗಿದೆ ಎಂದು ಸುಳ್ಳು ಹೇಳಿದ್ದ. ಮಾರನೇ ದಿನ ಬಾಲಕನ ಸ್ನೇಹಿತ ನಡೆದಿರುವ ಸತ್ಯ ಸಂಗತಿಯನ್ನು ಆತನ ತಂದೆಗೆ ತಿಳಿಸಿದ್ದಾನೆ. ಇದರಂತೆ ಮಗನ ಮೇಲೆ ಹಲ್ಲೆ ಮಾಡಿರುವುದಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.