ಬೆಂಗಳೂರು: ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳಲ್ಲಿ ಅವ್ಯವಹಾರ ಕುರಿತು ತನಿಖೆಗೆ ಸರ್ಕಾರ ವಿಶೇಷ ತಂಡ ರಚಿಸಿದೆ.
ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ, ಜಲಸಂಪನ್ಮೂಲ ಮತ್ತು ಪೌರಾಡಳಿತ ಇಲಾಖೆ ಮೂಲಕ ಅಂದಾಜು 500 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದಲ್ಲಿ ವಿವಿಧ ಕಾಮಗಾರಿಗಳನ್ನು ಚುನಾವಣೆಗಿಂತ ಮೊದಲು
ಒಂದು ವರ್ಷದಲ್ಲಿ ಅನುಷ್ಠಾನಗೊಳಿಸಿದ್ದು, ಅಧಿಕಾರದ ದುರುಪಯೋಗ ಹಾಗೂ ನಿಯಮಗಳ ಪಾಲನೆ ಮಾಡಿರುವುದಿಲ್ಲವೆಂದು ಆಪಾದಿಸಿ ಈ ಬಗ್ಗೆ ಲೋಕಾಯುಕ್ತ ಇಲ್ಲವೆ ಸಿಒಡಿ ತನಿಖೆ ಕೈಗೊಳ್ಳುವಂತೆ ಮಾಜಿ ಶಾಸಕ ಬಿ.ಆರ್.ಯಾವಗಲ್ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಗುಣ ಭರವಸೆ ವಲಯದ ಮುಖ್ಯ ಎಂಜಿನಿಯರ್ ಅಧ್ಯಕ್ಷರಾಗಿದ್ದು, ಲೋಕೋಪಯೋಗಿ ಇಲಾಖೆ ವಿಚಕ್ಷಣ ದಳದ ಅಧೀಕ್ಷಕ ಎಂಜಿನಿಯರ್, ಗುಣ ಭರವಸೆ ವಿಭಾಗದ ಅಧೀಕ್ಷಕ ಎಂಜಿನಿಯರ್ ಅವರನ್ನು ಸದಸ್ಯರಾಗಿ, ಕಾರ್ಯಪಾಲಕ ಎಂಜಿನಿಯರ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.