ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಂಡನಿಂದಲೇ ಹೆಂಡತಿಯ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಅಂತ ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಮಗಳನ್ನು ಕಳೆದುಕೊಂಡ ಪೋಷಕರು ಆರೋಪಿಸಿದ್ದಾರೆ.
ಮೃತ ದುರ್ದೈವಿಯನ್ನು ರೇಖಾ ಎಂದು ಗುರುತಿಸಲಾಗಿದ್ದು, ಗಂಡ ಸಂತೋಷ್ ಎಂಬಾತ ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಬಿಂಬಿಸಲು ಯತ್ನಿಸಿದ್ದನಂತೆ.
ಯಲಹಂಕ ಉಪನಗರ 3ನೇ ಹಂತದಲ್ಲಿ ಘಟನೆ ನಡೆದಿದ್ದು, ಸೈಟ್ನ ವಿಚಾರವಾಗಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಲೆ ಮಾಡಿದ ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿರುವ ಸಂತೋಷ್, ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಹೈಡ್ರಾಮಾ ಮಾಡಿದ್ದನಂತೆ.
ಏನಿದು ಪ್ರಕರಣ? ಮೃತ ರೇಖಾ ಮತ್ತು ಸಂತೋಷ್ ಇಬ್ಬರು ತಮಿಳುನಾಡು ಮೂಲದವರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದರಂತೆ. ಶಾಲೆಯಿಂದಲೇ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದ ಜೋಡಿ, ಕಳೆದ ಒಂದೂವರೆ ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಂತೆ. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ 6 ತಿಂಗಳ ಹೆಣ್ಣು ಮಗು ಕೂಡ ಇದೆ.
ಆದರೆ, ಮದುವೆ ಆದಾಗಿನಿಂದಲೂ ಸಂತೋಷ್ ಹಣಕ್ಕಾಗಿ ಹೆಂಡತಿಯನ್ನು ಪೀಡಿಸುತ್ತಿದ್ದನಂತೆ. ಹಣ, ಒಡವೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರೂ, ಸೈಟ್ ತಗೋಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದನಂತೆ.
ಆದರೆ ಪದೇ ಪದೇ ತವರು ಮನೆಗೆ ಹೋಗಿ ಹಣ ಕೇಳಲು ರೇಖಾ ಒಪ್ಪಿಕೊಂಡಿರಲಿಲ್ಲವಂತೆ. ಈ ನಡುವೆ ನಿನ್ನೆ ರೇಖಾಗಳನ್ನು ಕೊಲೆಗೈದು ಫ್ಯಾನಿಗೆ ನೇಣು ಹಾಕಿ ಕುಟುಂಬಸ್ಥರ ಎದುರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ನಾಟಕ ಮಾಡಿದ್ದನಂತೆ.
ಸದ್ಯ ರೇಖಾ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆರೋಪಿ ಸಂತೋಷ್ ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಂತೋಷ್ ವೆಲ್ಡಿಂಗ್ ಕೆಲಸ ಮಾಡಿಕೊಂಡು, ಪತ್ನಿ ಹಾಗೂ 6 ತಿಂಗಳ ಮಗುವಿನೊಂದಿಗೆ ಬೆಂಗಳೂರು ಯಲಹಂಕ ನ್ಯೂ ಟೌನ್ ನ ಅನಂತಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.