ಕೋಲಾರ: ಐದು ವರ್ಷದ ಬಾಲಕನನ್ನು ಅಪಹರಣ ಮಾಡಿದ ಆರೋಪಿಗಳನ್ನು ಕೇವಲ ಅರ್ಧ ಗಂಟೆಯಲ್ಲಿ ಬಂಧಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಲೋಕೇಶ್ ಎಂಬುವವರ ಮಗ ಯಶ್ವಿತ್ ಗೌಡನನ್ನು ಸಂಜೆ 5.30 ರ ಸುಮಾರಿಗೆ ಶಾಲೆಯಿಂದ ಮನೆಗೆ ಬರುವ ವೇಳೆ, ಮನೆ ಬಳಿ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಪಹರಣ ಮಾಡಿದ್ದರು.
ಇಟ್ಟಿಗೆ ಫ್ಯಾಕ್ಟರಿ ಹಾಗೂ ಬ್ಯಾಟರಿ ಡೀಲರ್ಶೀಪ್ ಹೊಂದಿರುವ ತಂದೆ ಲೋಕೇಶ್ರನ್ನು ಹೆದರಿಸಿ ಹಣ ಮಾಡಲು ಐದು ವರ್ಷದ ಬಾಲಕನನ್ನು ಅಪಹರಿಸಲಾಗಿತ್ತು. ಪ್ರಕರಣದ ಮಾಹಿತಿ ಸಿಕ್ಕ ಕೂಡಲೇ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು, ಶ್ರೀನಿವಾಸಪುರ ಹಾಗೂ ಗಡಿಯ ಆಂದ್ರ ಪ್ರದೇಶದ ಪೊಲೀಸರನ್ನು ಅಪಹರಣ ಪ್ರಕರಣ ಕುರಿತು ಅಲರ್ಟ್ ಮಾಡಲಾಗಿತ್ತು.
ಈ ವೇಳೆ ಅಪಹರಣಕಾರರು ಕಿಡ್ನಾಪ್ ಮಾಡಿಕೊಂಡು ಶ್ರೀನಿವಾಸಪುರ ರಸ್ತೆಯಲ್ಲಿ ಹೋಗಿರುವ ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಪುರದ ಪಿಎಸ್ಐ ಈಶ್ವರ್, ಎಎಸ್ಐ ಎಂ.ಡಿ.ನಾರಾಯಣಪ್ಪ, ಕೋಲಾರ ಗ್ರಾಮಾಂತರ ಠಾಣಾ ಪೊಲೀಸ್ ಸಿಪಿಐ ಲೋಕೇಶ್ ಕುಮಾರ್ ಅಪಹರಣಕಾರರ ಬೆನ್ನು ಬಿದ್ದಿದ್ದರು.
ಅಪಹರಣಕಾರರು ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಪಲ್ಲಿ ಬಳಿ ಹೋಗುತ್ತಿರುವ ಮಾಹಿತಿ ಸಿಕ್ಕ ಹಿನ್ನೆಲೆ ಅವರನ್ನು ಬೆನ್ನಟ್ಟಿ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಮಗುವನ್ನು ಪೋಷಕರ ಮಡಿಲಿಗೆ ಒಪ್ಪಿಸಿದ್ದು, ಅಪಹರಣಕಾರರನ್ನು ಬಂಧಿಸಿ, ಅವರು ಅಪಹರಣಕ್ಕೆ ಬಳಸಿದ್ದ ಬೈಕ್ನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತರನ್ನು ಬೇತಮಂಗಲದ ವೆಂಕಟೇಶ್ ಹಾಗೂ ಅರಹಳ್ಳಿಯ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಕಾರ್ಯವೈಕರಿಯನ್ನು ಕೋಲಾರ ಎಸ್ಪಿ ನಾರಾಯಣ್ ಕೂಡಾ ಶ್ಲಾಘಿಸಿದ್ದಾರೆ.