ಬೆಂಗಳೂರು : ಸೊಂಟದ ಪಟ್ಟಿಯಲ್ಲಿ ಮರೆಮಾಚಿ ಇನ್ಸೂಲೇಷನ್ ಟೇಪ್ನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಸೆಪ್ಟೆಂಬರ್ 9ರ ರಾತ್ರಿ ದುಬೈನಿಂದ ಇಕೆ564 ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದ ಈ ಪ್ರಯಾಣಿಕರನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 2.8 ಕೆಜಿ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ 1.58 ಕೋಟಿ ರೂಪಾಯಿ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುದನಾಳದಲ್ಲಿ ಚಿನ್ನದ ಬಿಸ್ಕೆಟ್ ಸಾಗಿಸುವಾಗ ಸಿಕ್ಕಿಬಿದ್ದ ಆರೋಪಿ: ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಲು ಪ್ರಯಾಣಿಕರು ಅಪಾಯಕ್ಕೆ ಸಿಲುಕುತ್ತಿರುವ ಪ್ರಕರಣಗಳು ಆಗಾಗ ಕಂಡುಬರುತ್ತವೆ. ಕಳೆದ ತಿಂಗಳು ಪ್ರಯಾಣಿಕನೋರ್ವ ಗುದನಾಳದಲ್ಲಿ ಚಿನ್ನದ ಬಿಸ್ಕೆಟ್ ಸಾಗಿಸುವಾ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಪ್ರಯಾಣಿಕನನ್ನು ಬಂಧಿಸಿ, ಆತನಿಂದ 600 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಕೋಲ್ಕತ್ತಾದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕನನ್ನು ಅನುಮಾನದ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.